ನಾಯಿಮರಿಗೆ ಸಿಎಂ ಹೋಲಿಕೆ ಅಪಾರ್ಥ ಬೇಡ

ಬೆಂಗಳೂರು,ಜ೫- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ್ದರ ಹಿಂದೆ ಸದುದ್ದೇಶವಿದೆ. ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ ತಮ್ಮ ಮಾತು ವಿವಾದಕ್ಕೆ ಕಾರಣವಾಗಿ ಬಿಜೆಪಿ ಮುಖಂಡರುಗಳು ಕೆಂಡಾಮಂಡಲವಾಗಿ ತಮ್ಮ ವಿರುದ್ಧ ಮುಗಿಬಿದ್ದ ಬೆನ್ನಲ್ಲೆ ಇಂದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯರವರು, ಮುಖ್ಯಮಂತ್ರಿಯವರನ್ನು ನಾಯಿಮರಿಗೆ ಹೋಲಿಸಿದರ ಹಿಂದೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಸದುದ್ದೇಶದಿಂದ ಈ ರೀತಿ ಮಾತನಾಡಿದ್ದೇನೆ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸದುದ್ದೇಶದಿಂದ, ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಧೈರ್ಯ ತೋರಿಸಬೇಕೆಂದು ಹೇಳಿದ್ದೇನೆ. ಕೇಂದ್ರ ಸರ್ಕಾರದಿಂದ ಅನುದಾನ ಸರಿಯಾಗಿ ಬಂದಿಲ್ಲ. ಅನುದಾನ ಕಡಿಮೆಯಾಗಿದೆ ಎಂಬ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು ಬೇರೆ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದರು.
ನಾಯಿಮರಿ ಹೇಳಿಕೆಗೆ ಪ್ರತಿಯಾಗಿ ತಮ್ಮನ್ನು ಇಲಿ-ಬೆಕ್ಕಿಗೆ ಹೋಲಿಸಿದ ಶ್ರೀರಾಮುಲು ವಿರುದ್ಧ ಗರಂ ಆದ ಸಿದ್ದರಾಮಯ್ಯ, ಅವನ್ಯಾರ್ರಿ ಪೆದ್ದ ಅವನ ಬಗ್ಗೆ ಮಾತನಾಡುವುದಿಲ್ಲ ಎಂದು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‌ಐ ಸಂಘಟನೆ ವಿರುದ್ಧದ ಮೊಕದ್ದಮ್ಮೆ ಹಿಂಪಡೆದಿದ್ದರು ಎಂಬ ಹೇಳಿಕೆಗೆ ಕೆಂಡಾಮಂಡಲವಾದ ಸಿದ್ದರಾಮಯ್ಯ, ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ, ಸುಳ್ಳು ಹೇಳೋದೇ ಅವರ ವೃತ್ತಿ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲು ಸೇರಿದಂತೆ ಎಲ್ಲರೂ ಸುಳ್ಳು ಹೇಳೋರೇ ಎಂದರು.