ನಾಯಿದಾಳಿಗೆ ತುತ್ತಾದ ಬಾಲಕಿಗೆ ಪರಿಹಾರ ನೀಡಲು ಒತ್ತಾಯ

ದಾವಣಗೆರೆ. ಜೂ.೯; ಬೀದಿ ನಾಯಿಗಳಿಂದ ದಾಳಿಗೊಳಗಾದ ಫಾತಿಮಾ ಎಂಬ ಬಾಲಕಿಗೆ 20 ಲಕ್ಷ ಪರಿಹಾರ, ಆರೋಗ್ಯದಲ್ಲಿ ಮುಂದೆ ಏರುಪೇರಾದಲ್ಲಿ ಉಚಿತ ಚಿಕಿತ್ಸೆ ಮತ್ತು ವಿದ್ಯಾಭ್ಯಾಸ ಕೊಡಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಫಯಾಜ್ ಅಹಮದ್ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಫಾತಿಮಾ ತನ್ನ ಅಜ್ಜಿ ಮನೆಯಿಂದ ಮನೆಗೆ ಮರಳುತ್ತಿರುವಾಗ ಸುಮಾರು 10-15 ಬೀದಿ ನಾಯಿಗಳು ದಾಳಿ ಮಾಡಿವೆ.ಬಾಲಕಿ  ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾಳೆ.  ಮಗುವಿನ ಪಾಲಕರು ಕಡುಬಡವರಾಗಿದ್ದು , ಮಗುವಿನ ಚಿಕಿತ್ಸೆಯ ಖರ್ಚುವೆಚ್ಚವನ್ನು ಭರಿಸುವುದು ಅಸಾಧ್ಯವಾಗಿರುತ್ತದೆ . ಇದೆಲ್ಲವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು 5 ದಿನ ಕಳೆದರು ಸಹ ಯಾವುದೇ ಪರಿಹಾರವಾಗಲಿ ಮತ್ತು ಚಿಕಿತ್ಸೆ ವೆಚ್ಚವನ್ನಾಗಲಿ ಕೊಡುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಾನಗರ ಪಾಲಿಕೆ ಆಯುಕ್ತರು , ಮೇಯರ್ ಮತ್ತು ಆರೋಗ್ಯ ಅಧಿಕಾರಿಗಳು ಭರವಸೆ ನೀಡಿ ಸುಮ್ಮನಾಗಿದ್ದಾರೆ . ಇಂತಹ ದುರ್ಘಟನೆಗಳು ಈ ಹಿಂದೆಯು ಸಹ ನಡೆದಿದ್ದು ಬಹಳಷ್ಟು ಬಾರಿ ಸಾರ್ವಜನಿಕರು ಮತ್ತು ಸಂಘಟನೆಗಳು ಮಹಾನಗರಪಾಲಿಕೆಗೆ ದೂರು ನೀಡಿದ್ದರು ಸಹ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುತ್ತಾರೆ . ಆದ ಕಾರಣ ದಾವಣಗೆರೆ ದಕ್ಷಿಣ ಭಾಗದಲ್ಲಿ ಜನ ಮೂಲ ಸೌಕರ್ಯವಿಲ್ಲದೇ ಜೀವನ ಮಾಡಲು ಅನಿವಾರ್ಯವಾಗಿದೆ . ಇದೇ ರೀತಿ ನಿರ್ಲಕ್ಷವು ಮುಂದುವರೆದಿದ್ದೆ ಆದಲ್ಲಿ ಇದಕ್ಕಿಂತ ಘೋರ ದುರ್ಘಟನೆಗಳು ದಿನಂಪ್ರತಿ ನಡೆಯುವುದರಲ್ಲಿ ಸಾಧ್ಯತೆ ಇರುತ್ತದೆ . ಆದ್ದರಿಂದ ನಾವು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಆಜಾದ ನಗರ ಪೋಲಿಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲು ದೂರನ್ನು ಸಲ್ಲಿಸಿದ್ದೇವೆ . ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ತಕ್ಷಣ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು , ಇಲ್ಲದಿದ್ದಲ್ಲಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದರು. ಕೂಡಲೇ ನಿರ್ಲಕ್ಷ ವಹಿಸಿದ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬೀದಿನಾಯಿಗಳು , ಹಂದಿಗಳು ಮತ್ತು ಬಿಡಾಡಿ ದನಗಳನ್ನು ವೈಜ್ಞಾನಿಕವಾಗಿ ತಡೆಗಟ್ಟಬೇಕು ಮತ್ತು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಹಬೂಬ್ ಸುಭಾನ್,ಇಸ್ಮಾಯಿಲ್ ಜಬೀವುಲ್ಲಾ,ಮನ್ಸೂರ್ ಅಲಿ ಮತ್ತಿತರರು ಇದ್ದರು.