ನಾಯಿಗೆ ಸ್ನಾನ ಮಾಡಿಸುವಾಗ ಅಣ್ಣ-ತಂಗಿ ನೀರುಪಾಲು

ಬೆಂಗಳೂರು,ಡಿ.೨೭- ಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ನಾಯಿಗೆ ಸ್ನಾನ ಮಾಡಿಸುವಾಗ ಅಣ್ಣ-ತಂಗಿ ಇಬ್ಬರೂ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಜಾಲದ ಬೆಟ್ಟಹಲಸೂರು ಬಳಿ ನಡೆದಿದೆ.
ತಮಿಳುನಾಡು ಮೂಲದ ಜೆನಿಫರ್ (೧೭), ಹಾಗೂ ಅವರ ಅಣ್ಣ ಪ್ರೇಮಕುಮಾರ್ (೨೧) ಮೃತಪಟ್ಟವರು, ಜೆನಿಫರ್ ಅಣ್ಣ ಪ್ರೇಮಕುಮಾರ್ ಮನೆಗೆ ಬಂದಿದ್ದು ನಿನ್ನೆ ಸಂಜೆ ಕುಟುಂಬದವರೊಂದಿಗೆ ಫಾರ್ಮ್ ನೋಡಲು ಸಾಕು ನಾಯಿಯ ಜೊತೆ ಹೋಗುತ್ತಿದ್ದರು.
ಮಾರ್ಗ ಮಧ್ಯದಲ್ಲಿ ಕಲ್ಲು ಕ್ವಾರಿಯ ನೀರಿನಲ್ಲಿ ನಾಯಿಯನ್ನು ತೊಳೆಯಲು ಹೋದ ಜೆನಿಫರ್ ನೀರಿಗೆ ಕಾಲು ಜಾರಿ ಬಿದ್ದಿದ್ದಾಳೆ.
ತಕ್ಷಣವೇ ಆಕೆಯನ್ನು ರಕ್ಷಿಸಲು ಪ್ರೇಮಕುಮಾರ್ ನೀರಿಗೆ ಧುಮುಕಿದ್ದಾನೆ. ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರನ್ನು ಕಾಪಾಡಲು ಪ್ರೇಮಕುಮಾರ್ ತಾಯಿ ನೀರಿಗಿಳಿದಿದ್ದಾಳೆ. ಆದರೆ ಸ್ಥಳದಲ್ಲಿದ್ದವರು ಆಕೆಗೆ ವೇಲ್ ನೀಡಿ ರಕ್ಷಣೆ ಮಾಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತದೇಹ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು.
ಆದರೆ ಕತ್ತಲಾದ ಕಾರಣ ಹಾಗೂ ಕ್ವಾರಿಯ ಹೊಂಡದ ಆಳ ೬೦ ಅಡಿ ಆಳ ಇರುವ ಹಿನ್ನೆಲೆ ಕಾರ್ಯಾಚರಣೆ ಸಾಧ್ಯವಾಗಲಿಲ್ಲ.
ಮತ್ತೆ ಇಂದು ಬೆಳಿಗ್ಗೆ ನುರಿತ ಈಜುಗಾರರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ.ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.