ನಾಯಕ ಸಮುದಾಯದ ಜರ್ಮಲಿ ಪಾಳೇಗಾರ ವಂಶಸ್ಥರ ಬದುಕಿಂದು ದುಸ್ತರ. ಸೂರ್ಯವಂಶದವರಿಗೆ ಮೂಡದ ಬೆಳಕು -ತಬ್ಬಲಿ ದೊರೆಗಳಿಗೆ ಹಸನಾಗದ ಬದುಕು….! !

ಕೂಡ್ಲಿಗಿ.ಅ.31:- ಜನರು ತಬ್ಬಲಿಗಳಾದರೆ ರಾಜ ಮಹಾರಾಜರು ಅಂದು ಜನರನ್ನು ಪೋಷಿಸುತ್ತಿದ್ದರು ಆದರೆ ರಾಜರೇ ತಬ್ಬಲಿಗಳಾದರೆ ಅವರನ್ನು ರಕ್ಷಿಸುವರಾರು ಇಂತಹ ರಾಜವಂಶಸ್ಥರ ಬದುಕಿನ ನಿಕೖಷ್ಠ ಚಿತ್ರಣ ಎಂತವರ ಮನಕಲಕದೇ ಇರಲಾರದು. ರಾಜವಂಶಸ್ಥರಾದರೂ ಇಂದಿಗೂ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು ಕುಟುಂಬ ನಿರ್ವಹಣೆಗೂ ಕೈ ಕೈ ಹಿಚುಕಿಕೊಳ್ಳಬೇಕಾದ ಪರಿಸ್ಥಿತಿ ಕೂಡ್ಲಿಗಿ ತಾಲೂಕಿನ ನಾಯಕ ಸಮುದಾಯದ ಪಾಳೇಗಾರರಲ್ಲಿ ಒಬ್ಬರಾಗಿರುವ ಜರ್ಮಲಿ ಪಾಳೇಗಾರರದ್ದಾಗಿದೆ.
ಚಿತ್ರದುಗ೯ದ ಪಾಳೇಗಾರರ ಮೇಲೆ ಹೈದರಾಲಿ ಯುದ್ಧ ಮಾಡುವ ಸನ್ನಿವೇಶ ಎದುರಾದಾಗ ಹೈದರಾಲಿಗೆ ತಕ್ಷಣವೇ ನೆನಪಾಗಿದ್ದು ಜಮ೯ಲಿ ಪಾಳೇಗಾರರ ಸಹಾಯ. ಶೌಯ೯ಕ್ಕೆ ಹೆಸರುವಾಸಿಯಾದ ಜಮ೯ಲಿ ಪಾಳೇಗಾರರ ಸಹಾಯದಿಂದಲೇ ಹೈದರಾಲಿ ಚಿತ್ರದುಗ೯ದ ಮೇಲೆ ಜಯಸಾಧಿಸಿದನು ಎಂಬುದನ್ನು ಇತಿಹಾಸ ಹೇಳುತ್ತಿದೆ ಆದರೆ ಇತಿಹಾಸ ಸೖಷ್ಠಿಸಿದ ಕೂಡ್ಲಿಗಿ ತಾಲೂಕಿನ ಜಮ೯ಲಿ ಪಾಳೇಗಾರ ವಂಶಸ್ಥರ ಬದುಕಿಂದು ಶೋಚನಿಯವಾಗಿದ್ದು ದೊರೆಗಳ ಕಾಲದ ಕೋಟೆ,ಕೊತ್ತಲು,ಬುರುಜುಗಳು, ಖಡ್ಗ,ಗುರಾಣಿ, ದೇಗುಲಗಳು ಇಂದು ಸದ್ದಿಲ್ಲದೇ ರಾಜರ ಬದುಕಿನಂತೆ ಅವನತಿಯ ಹಾದಿ ಹಿಡಿಯುತ್ತಿವೆ ಚಂದ್ರಶೇಖರ ರಾಜ ಹಾಗೂ ಇಮ್ಮಡಿ ಸಿದ್ದಪ್ಪನಾಯಕ ಹಾಗೂ ಯುವರಾಜ ಕೖಷ್ಣರಾಜವರ್ಮ ಈ ಮೂರು ರಾಜವಂಶಸ್ಥ ಕುಟುಂಬಗಳು ಇಂದಿಗೂ ಜರ್ಮಲಿಯಲ್ಲಿ ನಿಕೖಷ್ಠವಾಗಿ ವಾಸಿಸುತ್ತಿವೆ. ಇವರನ್ನು ನೋಡಿದರೆ ಇವರು ರಾಜವಂಶಸ್ಥರಾ ಎಂದು ನೋಡಿದರೆ ಆಶ್ಚರ್ಯಪಡುತ್ತೀರಿ.
ವಿಜಯನಗರ ಪತನದ ನಂತರ ಸ್ವತಂತ್ರರಾಗಿ ಹೊರಹೊಮ್ಮಿದ ಪಾಳೇಗಾರರಲ್ಲಿ ಜಮ೯ಲಿಯ ಪಾಳೇಗಾರ ಸಂಸ್ಥಾನವೂ ಒಂದು, ಕೂಡ್ಲಿಗಿ ತಾಲೂಕಿನಲ್ಲಿ ಜಮ೯ಲಿ, ಗುಡೇಕೋಟೆ, ಹಾಗೂ ವೀರನದುಗ೯ ಪಾಳೇಗಾರರು ಆಳಿದ ಕುರುಹುಗಳು, ಕೋಟೆ ಕೊತ್ತಲಗಳು ಇಂದಿಗೂ ನೋಡಬಹುದು. ಒಂದು ಕಾಲಕ್ಕೆ 133 ಹಳ್ಳಿಗಳ ಜಹಗೀರ್ ದಾರರಾಗಿ ಮೆರೆದ ಜಮ೯ಲಿ ರಾಜರು ಸೂಯ೯ವಂಶದ ಪಾಳೇಗಾರರು ಇಂದು ಜೀವನ ನಡೆಸಲಿಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ. ಚಿತ್ರದುಗ೯, ಹರಪನಹಳ್ಳಿ, ಗುಡೇಕೋಟೆ, ಸುರಪುರ ಮುಂತಾದ ಕನಾ೯ಟಕ, ಆಂದ್ರಪ್ರದೇಶದಲ್ಲಿರುವ ಪಾಳೇಗಾರರು ಸಹ ಇವರ ಸಂಬಂದಿಗಳಾಗಿದ್ದು ಈಗಿರುವ ಇಮ್ಮಡಿ ಸಿದ್ದಪ್ಪನಾಯಕನ ತಾಯಿ ರಾಣಿ ಧಮಾ೯ವತಮ್ಮ ಚಿತ್ರದುಗ೯ ಪಾಳೇಗಾರರ ವಂಶದವಳಾಗಿದ್ದು ಈಕೆಯನ್ನು ಜಮ೯ಲಿ ಪಾಳೇಗಾರ ವಂಶಸ್ಥರಾದ ವೆಂಕಟಪ್ಪನಾಯಕನಿಗೆ ಮದುವೆಮಾಡಿಕೊಡಲಾಗಿತ್ತು. ರಾಜವೈಭವನನ್ನು ಹತ್ತಿರದಲ್ಲಿ ನೋಡಿದ ರಾಣಿ ಧಮಾ೯ವತಮ್ಮ ಕಳೆದ ಹತ್ತು ವಷ೯ಗಳ ಹಿಂದೆಯಷ್ಟೇ ನಿಧನರಾದರು.
1980ರಲ್ಲಿ ರಾಜ ವೆಂಕಟಪ್ಪನಾಯಕ ಇದ್ದಾಗ ಸಕಾ೯ರದಿಂದ ಜಮ೯ಲಿ ರಾಜವಂಶಸ್ಥರಿಗೆ 47 ರೂಪಾಯಿ ಮಾಶಾಸನ ಬರುತಿತ್ತು ಆದರೆ ಇತ್ತೀಚಿನ ವಷ೯ಗಳಲ್ಲಿ ವೆಂಕಟಪ್ಪ ನಾಯಕನ ಪುತ್ರರಾದ ಈಗಿರುವ ಇಮ್ಮಡಿ ಸಿದ್ದಪ್ಪನಾಯಕ, ಚಂದ್ರಶೇಖರ ರಾಜರಿಗೆ ಮಾಶಾಸನ ಕೊಡುವುದನ್ನೇ ಸರ್ಕಾರ ನಿಲ್ಲಿಸಿಬಿಟ್ಟಿದ್ದಾರೆ. ಇರುವ ಹತ್ತು ಎಕರೆ ಜಮೀನಿನಲ್ಲಿ ಮಳೆ ಬಂದರೆ ಬೆಳೆ ಇಲ್ಲದಿದ್ದರೆ ಮನೆಯವರೆಲ್ಲಾ ಉಪವಾಸ. ಈಗ್ಗೆ ಐದಾರು ವರ್ಷಗಳಿಂದ ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಹೊರಗಡೆ ಕೂಲಿ ಹೋದರೆ ರಾಜವಂಶಸ್ಥರೆಂಬ ಬಿಗುಮಾನ, ಬಿಟ್ಟರೆ ಅಂದು ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಮನೆ ತುಂಬ ಮಕ್ಕಳು ಜಮೀನಿನನಲ್ಲಿ ಬರುವ ಬೆಳೆ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಈಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಇವರಲ್ಲಿ ಕಾಸಿಲ್ಲ ಈಗಾಗಿ ಇವರ ಬದುಕು ಮತ್ತಷ್ಟು ಅತಂತ್ರವಾಗಿದೆ.
ಇಂದಿಗೂ ರಾಜಪರಂಪರೆ ಆಚರಣೆಃ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಪ್ರತಿವರ್ಷ ನಡೆಯುವ ಉಜ್ಜಿನಿ ಶಿಖರಕ್ಕೆ ತೈಲ ಎರೆಯುವ ಸಂಪ್ರದಾಯಕ್ಕೆ ಜರ್ಮಲಿ ರಾಜವಂಶಸ್ಥರು ಈಗಲೂ ಎಣ್ಣೆ ಕಳುಹಿಸುತ್ತಾರೆ. ಪೂರ್ವಜರು ಧಾರ್ಮಿಕ ಆಚರಣೆಗಳಿಗೆ ನೀಡುತ್ತಿದ್ದ ಕಾಣಿಕೆ, ಸಂಪ್ರದಾಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಮನೆಯಲ್ಲಿ ಹೆಣ್ಣುಮಕ್ಕಳು ಗೋಶಾ( ಮುಖಕ್ಕೆ ಬಟ್ಟೆ) ಹಾಕಿಕೊಂಡೇ ಇರಬೇಕು, ಹೆಣ್ಣುಮಕ್ಕಳು ಈಗಲೂ ಹೊರಗಡೆ ಬಂದು ಕೆಲಸ ಮಾಡುವುದು ರಾಜವಂಶಸ್ಥರಲ್ಲಿ ನಿಷಿಧ್ದ ಈ ಪರಂಪರೆಯನ್ನೂ ಈಗಲೂ ರಾಜವಂಶಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. 67 ವರ್ಷದ ಚಂದ್ರಶೇಖರ ರಾಜನಿಗೆ ಮಕ್ಕಳಿಲ್ಲ ಆತನ ಜೀವನ ನಿರ್ವಹಣೆ ಕಷ್ಟ ಮತ್ತೋರ್ವ ರಾಜ 65 ವರ್ಷದ ಇಮ್ಮಡಿ ಸಿದ್ದಪ್ಪನಾಯಕನಿಗೆ ಜ್ಯೋತಿ, ಮೇಘಾ, ಜಾಹ್ನವಿ 3 ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಶಶಿಧರ ನಾಯಕ ಪಿಯುಸಿ ಓದಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡುತ್ತಿದ್ದಾನೆ. ಕೖಷ್ಣರಾಜವರ್ಮ ಎನ್ನುವ ಯುವರಾಜನ ಬದುಕು ಸಹ ದುಸ್ತರವಾಗಿದ್ದು ಜರ್ಮಲಿ ರಾಜವಂಶಸ್ಥರ ಬದುಕಿಗೆ ಆಸರೆ ಬೇಕಿದೆ ಜೊತೆಗೆ ಕೂಡ್ಲಿಗಿ ತಾಲೂಕಿನಲ್ಲಿ ಜರ್ಮಲಿ ಪಾಳೇಗಾರರ ಉತ್ಸವ ಆಚರಿಸುವ ಮೂಲಕ ನಮ್ಮ ತಾಲೂಕಿನ ಐತಿಹಾಸಿಕ ಪಾಳೇಗಾರರ ಪರಂಪರೆಯನ್ನು ಗೌರವಿಸುವ ಕಾರ್ಯವನ್ನು ನಾಯಕ ಸಮುದಾಯದ ಮುಖಂಡರು, ಚಿಂತಕರು, ಸಂಘಸಂಸ್ಥೆಗಳು ಸರ್ಕಾರದ ಗಮನಕ್ಕೆ ತಂದು ಪಾಳೇಗಾರರ ಉತ್ಸವ ಮಾಡುವಂತೆ ಒತ್ತಾಯಿಸಬೇಕಿದೆ.
ಕೋಟ್- ಈ ಹಿಂದೆ ಸರ್ಕಾರ ಜರ್ಮಲಿ ರಾಜವಂಶಸ್ಥರಿಗೆ ಪಿಂಚಣಿ ನೀಡಿತ್ತು ಆದ್ರೆ ಈಗ ಪಿಂಚಣಿ ಬರುತ್ತಿಲ್ಲ ಸರ್ಕಾರ ರಾಜವಂಶಸ್ಥರಿಗೆ ಪಿಂಚಣಿ ನೀಡಲು ಸರ್ಕಾರ ಮುಂದಾಗಬೇಕು, ರಾಜ್ಯದಲ್ಲಿ ಪಾಳೇಗಾರರ ಆಳ್ವಿಕೆಯಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ಜರ್ಮಲಿ ಪಾಳೇಪಟ್ಟು ಕೂಡ ಒಂದಾಗಿದ್ದು ನಮ್ಮ ಪೂರ್ವಜರು ಈ ಭಾಗದಲ್ಲಿ ರಾಜರಾಗಿ ಆಳ್ವಿಕೆ ನಡೆಸಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಾಗ ರಾಜವಂಶಸ್ಥರಾದ ನಮಗೆ ಯಾವುದೇ ಗೌರವ, ಸೌಲಭ್ಯಗಳು ದೊರಕಿಲ್ಲ, ಅನಕ್ಷರಸ್ಥರಾದ ನಮ್ಮ ವಂಶಸ್ಥರ ಬದುಕಿಗೆ ಸರ್ಕಾರ ಆಸರೆಯಾಗಬೇಕಿದೆ ಎನ್ನುತ್ತಾರೆ ಜರ್ಮಲಿಯ ರಾಜವಂಶಸ್ಥ ಕೖಷ್ಣರಾಜವರ್ಮ.

ಕೋಟ್- ರಾಜ್ಯದ ಪಾಳೇಗಾರರ ಇತಿಹಾಸದಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ಗುಡೇಕೋಟೆ, ವೀರನದುರ್ಗ, ಜರ್ಮಲಿ ಈಗೇ 3 ಪಾಳೇಗಾರರು ಆಳ್ವಿಕೆ ನಡೆಸಿದ್ದು ಈ ತಾಲೂಕಿನ ಹೆಮ್ಮೆಯಾಗಿದೆ. ಜರ್ಮಲಿ ಪಾಳೇಗಾರರು ಚಿತ್ರದುರ್ಗ ಪಾಳೇಗಾರರೂ ಹಾಗೂ ಹೈದರಾಲಿ ನಡುವೆ ನಡೆದ ಯುದ್ಧದಲ್ಲಿ ಪ್ರಮುಖಪಾತ್ರವಹಿಸಿದ್ದಾರೆ. ತಾಲೂಕಿನಲ್ಲಿ ಪಾಳೇಗಾರರ ಹೆಸರಿನಲ್ಲಿ ಪ್ರತಿವರ್ಷ ಉತ್ಸವ ಆಚರಿಸುವ ಮೂಲಕ ಇಲ್ಲಿಯ ಪಾಳೇಗಾರರ ಪರಂಪರೆಗೆ ಗೌರವ ಸಲ್ಲಿಸುವ ಕಾರ್ಯ ನಡೆಯಬೇಕಿದೆ ಪಾಳೇಗಾರರ ಇತಿಹಾಸ ಪರಂಪರೆ ನೆನಪಿಸಲು ಈ ಭಾಗದಲ್ಲಿ ಪ್ರಮುಖವಾಗಿ ಜರ್ಮಲಿ ಉತ್ಸವ ಆಚರಣೆಯನ್ನು ಮಾಡಲು ಹಾಗೂ ರಾಜವಂಶಸ್ಥರಿಗೆ ಮಾಶಾಸನ, ಅವರ ಬದುಕಿನ ಆಸರೆ ನೀಡುವ ಬಗ್ಗೆ ನಾಯಕ ಸಮುದಾಯದ ಮುಖಂಡರು, ಚಿಂತಕರು, ಪಕ್ಷಾತೀತವಾಗಿ ಸಮುದಾಯದ ಜನಪ್ರತಿನಿದಿನಗಳು ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಮಯೂರ.