ನಾಯಕರ ಅಬ್ಬರದ ಪ್ರಚಾರ

ಬೆಂಗಳೂರು,ಮೇ೫:ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜ್ಯದಲ್ಲಿ ಘಟಾನುಘಟಿ ನಾಯಕರುಗಳ ಮತಬೇಟೆ ಬಿರುಸಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ಈಗಾಗಲೇ ಕಳೆದವಾರ ಎರಡು ಬಾರಿ ರಾಜ್ಯಕ್ಕೆ ಆಗಮಿಸಿ ೪ ದಿನಗಳ ಕಾಲ ರಾಜ್ಯದ ವಿವಿಧೆಡೆ ಸಾರ್ವಜನಿಕ ರ್‍ಯಾಲಿ, ರೋಡ್ ಶೋ ನಡೆಸಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರಮೋದಿ ಅವರು, ಇಂದು ಬಳ್ಳಾರಿ ಮತ್ತು ತುಮಕೂರುಗಳಲ್ಲಿ ಬಿಜೆಪಿಯ ಸಮಾವೇಶದಲ್ಲಿ ಭಾಗಿಯಾಗಿ ಮತ ಬೇಟೆ ನಡೆಸುವರು.
ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲೇ ಮೊಕ್ಕಾಂ ಹೂಡುವ ಪ್ರಧಾನಿಗಳು, ಬಹಿರಂಗ ಪ್ರಚಾರ ಅಂತ್ಯವಾಗುವ ಕೊನೆಯ ದಿನದವರೆಗೂ ಪ್ರಚಾರ ನಡೆಸಲಿರುವುದು ಬಿಜೆಪಿಯ ಕಾರ್ಯಕರ್ತರಿಗೆ ಶಕ್ತಿಯ ಟಾನಿಕ್ ಸಿಕ್ಕಂತಾಗಲಿದೆ. ಈಗಾಗಲೇ ಚುನಾವಣೆಯ ಪ್ರಚಾರದ ಕಾವು ತಾರಕಕ್ಕೇರಿದ್ದು, ಮೋದಿ ಅವರ ಪ್ರಚಾರದಿಂದ ಚುನಾವಣಾ ಕಾವು ತಾರಕಕ್ಕೇರಲಿದೆ.
ಇಂದು ಮಧ್ಯಾಹ್ನ ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಮೋದಿ ಅವರು, ಸಂಜೆ ೪ ಗಂಟೆಗೆ ತುಮಕೂರಿನಲ್ಲಿ ನಡೆಯುವ ಬಿಜೆಪಿಯ ಪ್ರಚಾರ ರ್‍ಯಾಲಿಯಲ್ಲಿ ಭಾಗವಹಿಸಿ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡುವರು.
ಬಳ್ಳಾರಿಯಲ್ಲಿ ನಡೆದ ಪ್ರಧಾನಿಯವರ ರೋಡ್ ಶೋ ನಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಈ ಸಮಾವೇಶ ಆ ಭಾಗದಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಯಿತು.
ನಾಳೆ ಬೆಂಗಳೂರಿನಲ್ಲಿ ಎರಡು ದಿನ ರೋಡ್ ಶೋ
ನಾಳೆ ಶನಿವಾರ ಮತ್ತು ಭಾನುವಾರ ಎರಡೂ ದಿನ ಬೆಂಗಳೂರು ನಗರದಲ್ಲಿ ಮೋದಿ ಅವರು ಸುಮಾರು ೩೬ ಕಿ.ಮೀ ರೋಡ್ ಶೋ ನಡೆಸಿ, ಬೆಂಗಳೂರಿನಲ್ಲಿ ಕಮಲ ಅರಳಿಸುವ ಪ್ರಯತ್ನಗಳಿಗೆ ಬಲ ತುಂಬುವರು.
ಕಳೆದವಾರ ಸಹ ಬೆಂಗಳೂರಿನಲ್ಲಿ ನಡೆದಿದ್ದ ಪ್ರಧಾನಿ ಮೋದಿ ಅವರ ರೋಡ್ ಶೋನಲ್ಲಿ ಹೆಚ್ಚು ಜನ ಭಾಗವಹಿಸಿ ಮೋದಿ ಮೇನಿಯಾ ಸೃಷ್ಟಿಯಾಗಿದ್ದನ್ನು ಅರಿತ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಪ್ರಧಾನಿಯವರ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರವಾದ ಅಲೆಯನ್ನು ಎಬ್ಬಿಸಲು ಕಾರ್ಯತಂತ್ರ ರೂಪಿಸಿರುವುದು ಸ್ಪಷ್ಟ.ಬಿಜೆಪಿ ಪರವಾಗಿ ಈಗಾಗಲೇ ರಾಜ್ಯದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಕೇಂದ್ರದ ಪ್ರಮುಖ ನಾಯಕರುಗಳೆಲ್ಲ ರಾಜ್ಯದಲ್ಲೇ ಮೊಕ್ಕಾಂ ಹೂಡಿ ರಾಜ್ಯದೆಲ್ಲೆಡೆ ಪ್ರಚಾರ ನಡೆಸಿದ್ದಾರೆ.
ಇಂದಿನಿಂದ ಮೋದಿ ಅವರ ಮೂರು ದಿನಗಳು ಅಬ್ಬರದ ಪ್ರಚಾರದ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತಷ್ಟು ಶಕ್ತಿ, ಚೈತನ್ಯ, ಹುರುಪು ತುಂಬಲಿದ್ದಾರೆ.

ಕೈನಿಂದ ಮತಬೇಟೆ
ಕಾಂಗ್ರೆಸ್ ನಾಯಕರೂ ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಆ ಪಕ್ಷದ ಪರವಾಗಿಯೂ ಘಟಾನುಘಟಿ ನಾಯಕರುಗಳು ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಸೇರಿದಂತೆ ಹಲವು ನಾಯಕರುಗಳು ರಾಜ್ಯದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ್ದು, ಚಲನಚಿತ್ರ ತಾರೆಗಳಾದ ಶಿವರಾಜ್‌ಕುಮಾರ್, ದುನಿಯಾ ವಿಜಯ್, ರಮ್ಯಾ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಪರ ಪ್ರಚಾರದ ಅಖಾಡಕ್ಕೆ ಧುಮುಕ್ಕಿದ್ದಾರೆ. ಕಾಂಗ್ರೆಸ್ ಸಹ ಅಬ್ಬರದ ಪ್ರಚಾರ ನಡೆಸಿದೆ.
ಜೆಡಿಎಸ್ ಸಹ ಪ್ರಚಾರವನ್ನು ಬಿರುಸುಗೊಳಿಸಿದ್ದು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಇವರುಗಳು ಜೆಡಿಎಸ್‌ನ ಪ್ರಚಾರದ ಮುಂಚೂಣಿಯಲ್ಲಿದ್ದು, ರಾಜ್ಯದ ವಿವಿಧೆಡೆ ಪಕ್ಷದ ಪರ ಮತಬೇಟೆ ನಡೆಸಿದ್ದಾರೆ.