ನಾಯಕನೇ ಆಗಬೇಕೆಂದಿಲ್ಲ ಪಾತ್ರಕ್ಕೆ ಜೀವ ತುಂಬುವ ಹಂಬಲ

* ಚಿಕ್ಕನೆಟಕುಂಟೆ ಜಿ.ರಮೇಶ್

ಮಾಯಾ ಜಗತ್ತಿನಲ್ಲಿ ‌ಬಣ್ಣದ “ಬದುಕು ” ಕಿರಣ ಮೂಡಿಸಿದ ದತ್ತ ನಿಗೆ ಮನೆ ಮಂದಿ‌‌ಯ ಪ್ರೀತಿಯ ಜೊತೆ ಜೊತೆಗೆ ಅನುಭವದ ಗಂಟು ಮೂಟೆ ಕಟ್ಟಿಕೊಟ್ಟಿದೆ “ಬ್ರಹ್ಮಗಂಟು”.ಇದೇ ಕಾರಣಕ್ಕೆ “ಹರ್ಷ “ದ ಹೊನಲು ಮೂಡಿಸಿದೆ.

ನಿರ್ದೇಶಕಿ ,ನಿರ್ಮಾಪಕರರಾದ ಶೃತಿ ನಾಯ್ಡು , ರಮೇಶ್ ಇಂದಿರಾ ಅವರ ಸಹಕಾರ ,‌ಪ್ರೋತ್ಸಾಹ ಬೇರೆ ಸಿನಿಮಾ ,ಧಾರಾವಾಹಿ ಕಡೆಗೆ ಮನಸ್ಸು ಬೇರೆ ಹೋಗದಂತೆ ಹಿಡಿದಿಟ್ಟಿದೆ.‌ ಬರೋಬ್ಬರಿ 1 ಸಾವಿರ ಎಪಿಸೋಡ್ ದಾಟಿ ಮುನ್ನೆಡೆದಿದ್ದು ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ.

ಯಾರ‌ ಬಗ್ಗೆ ಎನ್ನುವ‌ ಸುಳಿವು ಸಿಕ್ಕಿರಬೇಕು‌ ಹೌದು ಅವರೇ ಹರ್ಷ ಗೌಡ. “ಬ್ರಹ್ಮಗಂಟು” ಧಾರಾವಾಹಿಯಲ್ಲಿ ಪಾಸಿಟೀವ್ ಮತ್ತು‌ ನೆಗೆಟೀವ್ ಶೇಡ್ ನಿಂದ ಎಲ್ಲರ ಎಲ್ಲರ ಗಮನ ಸೆಳೆದ‌ ಪ್ರತಿಭಾವಂತ. ಬಣ್ಣದ ಬದುಕಿನ‌ ಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಹರ್ಷ.ಇನ್ನು ಅವರೇ ಮಾತುಗಳಲ್ಲಿ..

ಪ್ಯಾರಾ ಮೆಡಿಕಲ್ ಕೋರ್ಸ್ ಮಾಡಿ ಹಾಸನದಲ್ಲಿದ್ದ ನನ್ನನ್ನು ಬಣ್ಣ ದ ಬದುಕಿನ ಪರಿಚಯ ಮಾಡಿಸಿ ಇಂದು ನಟನಾಗಿ ತೆರೆಯ ಮೇಲೆ ಕಾಣಸಿಕೊಳ್ಳಲು “ಬಿಸಲೆ” ಚಿತ್ರದ ನಿರ್ದೇಶಕ‌‌ ಸಂದೀಪ್ ಗೌಡ‌ ಕಾರಣ. ಆದರೆ ಇಂದು ಅವರಿಲ್ಲ.ನಟನಾಗಲು ಸಹೋದರ ಕಾರಣ.

ಈ ಟಿವಿಯ “ಬದುಕು” ಧಾರಾವಾಹಿಯಲ್ಲಿ ಮೊದಲ ಬಾರಿಗೆ “ಕಿರಣ್” ಎನ್ನುವ ಪಾತ್ರ ಮಾಡಿದ್ದೆ.ಅದಾದ ಬಳಿಕ “ಬ್ರಹ್ಮಗಂಟು” ಧಾರಾವಾಹಿ ಆರಂಭವಾದ ದಿನದಿಂದ ದತ್ತನ ಪಾತ್ರ ಮಾಡುತ್ತಿದ್ದೇನೆ. ಬರೋಬ್ಬರಿ ನಾಲ್ಕು ವರ್ಷದಿಂದ ಮುನ್ನೆಡೆಯುತ್ತಿದೆ. ಧಾರಾವಾಹಿ 1 ಸಾವಿರ ಎಪಿಸೋಡ್ ದಾಟಿದೆ.

ಭರತ್ ಬೋಪಣ್ಣ ಮತ್ತು ನಾನು‌ ಇಬ್ಬರು ನಾಯಕರು. ಧಾರಾವಾಹಿಯ ಸುದೀರ್ಘ ಪಯಣ ಯಶಸ್ಸಿನ‌ ಜೊತೆಗೆ ನಾಡಿನ ಜನರ ಮುಂದೆ ನಮ್ಮನು ಪರಿಚಯ ಮಾಡಿಕೊಟ್ಟಿದೆ.ಕಲಾವಿದರಾಗಿ ಖುಷಿ ಅನ್ನಿಸುತ್ತದೆ.

“ಬ್ರಹ್ಮಗಂಟು” ಮುಗಿಯುವ ತನಕ ಬೇರೆ ಧಾರಾವಾಹಿ ಅಥವಾ ಸಿನಿಮಾಗಳ ಕಡೆಗೆ ಗಮನ ಹರಿಸುವುದಿಲ್ಲ. ಅದಕ್ಕೆ ಕಾರಣ ಇಡೀ ತಂಡ. ಎಪಿಸೋಡ್ ನಿರ್ದೇಶಕ ಪ್ರತಾಪ್ ಅವರಿಂದ ಹಿಡಿದು ನಿರ್ಮಾಪಕಿ ಶೃತಿ‌ನಾಯ್ಡು ಅವರ ಸಹಕಾರ ನಮ್ಮನ್ನು ಪ್ರೀತಿಯಲ್ಲಿ ಕಟ್ಟಿಹಾಕಿದೆ.

ಧಾರಾವಾಹಿಯಲ್ಲಿ ಒಳ್ಳೆಯ ತಂಡ, ಕಲಾವಿದರು ಸಿಕ್ಕಿದ್ದಾರೆ. ಕುಟುಂಬದ ಸದಸ್ಯರಂತೆ ಇದ್ದೇವೆ.‌ ಧಾರಾವಾಹಿಯಲ್ಲಿ ನಟಿಸಲು ಆರಂಭಿಸದ ಮೇಲೆ ಜನ ನಮ್ಮನ್ನು ಗುರುತಿಸುತ್ತಾರೆ, ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದಕ್ಕಿಂತ ಇನ್ನೇನು ಬೇಕು. ಸಂಭಾಷಣೆಯನ್ನು ಉರುವು ಹೊಡೆಯುವುದಕ್ಕಿಂತ ಸನ್ನಿವೇಶವನ್ನು ಅರ್ಥ ಮಾಡಿಸುತ್ತಾರೆ.ಹೀಗಾಗಿ ನಟನೆ ಮಾಡಲು ಸುಲಭವಾಗಿದೆ.ಜೊತೆಗೆ ನಿರ್ದೇಶಕರು ಕೂಡ ಸ್ವಾತಂತ್ರ್ಯ ನೀಡಿರುವ ಹಿನ್ನೆಲೆಯಲ್ಲಿ ಸಂದರ್ಭ ಮತ್ತು ಸನ್ನಿವೇಶಕ್ಕೆ ಹೊಂದಿಕೊಂಡು ನಟಿಸುತ್ತೇವೆ. ಜೊತೆಗೆ ನಿರ್ದೇಶಕರನ್ನು ಅರಿತುಕೊಂಡು ಕೆಲಸ ಮಾಡುತ್ತೇವೆ ಎನ್ನುತ್ತಾರೆ ಹರ್ಷ.

ಸೀರಿಯಲ್ ನಲ್ಲಿ ಹೆಚ್ಚು ಆಸಕ್ತಿ

ಸಿನಿಮಾ ಮಾಡಲು ಆರೇಳು ತಿಂಗಳ ಕಾಲ ಶ್ರಮ ಪಡಬೇಕು.ತೆರೆಗೆ ಬಂದಾಗ ಅದು ಎಷ್ಟು ‌ದಿನ ಓಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.ಹೀಗಾಗಿ ಸಿನಿಮಾಗಿಂತ ಸೀರಿಯಲ್ ಕಡೆಗೆ ಸಂಪೂರ್ಣ ಗಮನ ಹರಿಸಿದ್ದೇನೆ. ಸೀರಿಯಲ್ ಮೂಲಕ ಬೇಗ ಜನರನ್ನು ತಲುಪಬಹುದು ಎಂಬ ಉದ್ದೇಶವೂ ಕೂಡ ಎನ್ನುತ್ತಾರೆ ಹರ್ಷ.

ಜೀವ ತುಂಬುವುದಷ್ಟೇ ಗುರಿ

ಧಾರಾವಾಹಿಯಲ್ಲಿ ನಾಯಕನೇ ಆಗಬೇಕು ಅಂತ ಯಾವುದೇ ಷರತ್ತುಗಳು ಇಲ್ಲ.ಸಿಗುವ ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಜೀವ ತುಂಬುವ ಉದ್ದೇಶ ನನ್ನದು.’ಬ್ರಹ್ಮಗಂಟು” ಧಾರಾವಾಹಿಯಲ್ಲಿ ಇಬ್ಬರು ನಾಯಕರು.ಎರಡೂ ಪಾತ್ರಕ್ಕರ ಪ್ರಾಮುಖ್ಯತೆ ಇದೆ. ನನಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದೇನೆ ಆ ಖುಷಿ ಇದೆ.