ನಾಯಕತ್ವ ಬದಲಾವಣೆ ಚರ್ಚೆ ಇಲ್ಲ: ಶೆಟ್ಟರ್

ಹುಬ್ಬಳ್ಳಿ, ಜೂ 7: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇಲ್ಲ ಎಂದು ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ. ಪಕ್ಷದ ವರಿಷ್ಠರಿಂದಲೂ ಈ ಕುರಿತು ಚರ್ಚೆ ಇಲ್ಲ ಎಂದರು.

ಬಿಎಸ್‍ವೈ ನಾಯಕತ್ವ ಬದಲಾವಣೆ ವಿಷಯ ರಾಜ್ಯ ರಾಜಕೀಯದಲ್ಲಿ ಪದೇ ಪದೇ ಏಕೆ ಚರ್ಚೆಯಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಸಹಿ ಸಂಗ್ರಹ ವಿಚಾರ ಕೂಡ ನನಗೆ ಗೊತ್ತಿಲ್ಲ. ಇಂತಹ ಬೆಳವಣಿಗೆಯಿಂದ ಸರ್ಕಾರದ ಘನತೆಗೆ ಧಕ್ಕೆಯಾಗುತ್ತಿದೆ. ಇದರಿಂದ ಸರಿಯಾಗಿ ಆಡಳಿತ ಮಾಡಲು ಸಹ ಸಾಧ್ಯವಾಗುವುದಿಲ್ಲ ಎಂದರು.

ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಿ ಬೆಳಿಸಿದವರು. ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಬೇಸರಗೊಂಡು ಅವರು ನುಡಿದಿರಬಹುದು. ಆದರೆ ಇದರಲ್ಲಿ ವಿಶೇಷ ಅರ್ಥವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಕೋವಿಡ್ ಅನ್‍ಲಾಕ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್ ಪ್ರತಿಶತ 5 ಕ್ಕಿಂತ ಕಡಿಮೆ ಬರುವವರೆಗೂ ಅನ್ ಲಾಕ್ ಮಾಡುವುದಿಲ್ಲ. ಜೂನ್ 14 ರ ನಂತರ ಎಲ್ಲವನ್ನು ಒಮ್ಮೆಲೆ ಅನ್‍ಲಾಕ್ ಮಾಡದೆ ಹಂತಹಂತವಾಗಿ ಮಾಡಲಾಗುವುದು ಎಂದು ಸಚಿವ ಶೆಟ್ಟರ್ ತಿಳಿಸಿದರು.