’ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ’

ಬೆಂಗಳೂರು,ಮೇ ೨೭- ನಾಯಕತ್ವ ಬದಲಾವಣೆ ವಿಚಾರವೇ ಇಲ್ಲ, ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಖಡಾತುಂಡವಾಗಿ ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಯಾರೋ ಒಬ್ಬರು ಎಲ್ಲಿಗೋ (ದೆಹಲಿ) ಹೋಗಿ ಬಂದರು ಎಂಬುದನ್ನೇ ದೊಡ್ಡದು ಮಾಡುವುದು ಬೇಡ. ಹೀಗೆ ಹೋದವರಿಗೆ ಹೈಕಮಾಂಡ್ ಸರಿಯಾಗಿ ಉತ್ತರ ಕೊಟ್ಟು ಕಳುಹಿಸಿದೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ವಿಚಾರಗಳು ಅಪ್ರಸ್ತುತ ಎಂಬ ದಾಟಿಯಲ್ಲಿ ಮಾತನಾಡಿದರು.
ದೇಶದ ಮಾಜಿ ಪ್ರಧಾನಿ ದಿ. ಜವಹರಲಾಲ್ ನೆಹರೂರವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ನೆಹರು ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮುಂದೆ ಇರುವುದು ಕೋವಿಡ್ ನಿಯಂತ್ರಣ, ಜನಹಿತ ಕಾಪಾಡುವಂತದ್ದು ನನ್ನ ಆಧ್ಯತೆ, ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದಿದ್ದಾರೆ ಎಂಬ ಕಾರಣಕ್ಕೆ ನಾಯಕತ್ವ ಬದಲಾವಣೆಯಾಗುತ್ತದೆ ಎಂಬುದಕ್ಕೆಲ್ಲ ಉತ್ತರ ಹೇಳುವ ಅಗತ್ಯವಿಲ್ಲ ಎಂದರು.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೆಲ ಸಚಿವರು, ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಯಾರೋ ಎಲ್ಲಿಗೋ ಹೋದರೂ ಎಂಬುದನ್ನೇ ದೊಡ್ಡದು ಮಾಡುವುದು ಬೇಡ. ಹೀಗೆ ಹೋದವರಿಗೆ ಸರಿಯಾದ ಉತ್ತರವನ್ನು ವರಿಷ್ಠರು ಕೊಟ್ಟಿದ್ದಾರೆ. ಇದು ನಿಮಗೂ ಗೊತ್ತಿದೆ.ಹೀಗಿದ್ದರೂ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳುತ್ತಿರಲ್ಲ ಎಂದು ಸುದ್ದಿಗಾರರ ಮೇಲೆ ಗರಂ ಆದರು.
ದೆಹಲಿಯಲ್ಲಿ ಏನೇನೂ ಬೆಳವಣಿಗೆಯಾಗಿದೆ. ಎಲ್ಲವೂ ಎಲ್ಲರಿಗೂ ಗೊತ್ತಿದೆ. ಯಾರಿಗೂ ಗೊತ್ತಿಲ್ಲದ ವಿಚಾರವೇನಿಲ್ಲ ಎಂದು ಹೇಳುವ ಮೂಲಕ ಕೆಲವರು ದೆಹಲಿಯಲ್ಲಿ ನಾಯಕತ್ವ ಬದಲಾವಣೆಗೆ ಆಡಿದ ’ಆಟ’ ಪ್ರಯೋಜನವಾಗಿಲ್ಲ ಎಂಬುದನ್ನು ಯಡಿಯೂರಪ್ಪ ಪರೋಕ್ಷವಾಗಿ ಹೊರ ಹಾಕಿದರು.
ಪಕ್ಷದ ವರಿಷ್ಠರು ಶಾಸಕಾಂಗ ಪಕ್ಷದ ಸಭೆ ಕರೆಯಲು ಸೂಚಿಸಿದ್ದಾರೆಯೇ, ಸಭೆ ಕರೆಯುವಿರಾ ಎಂಬ ಪ್ರಶ್ನೆಗೆ ಈ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ, ನಿಮ್ಮ ಬಳಿ ಈ ವಿಚಾರ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಮಾಧ್ಯವದವರ ವಿರುದ್ಧವೇ ಸಿಟ್ಟಾದರು.
ಕೋವಿಡ್‌ನ ಈ ಸಂದರ್ಭದಲ್ಲಿ ಸಚಿವರಿರಲಿ, ಶಾಸಕರಿರಲಿ ಎಲ್ಲರೂ ಒಟ್ಟಾಗಿ ಸೇರಿ ಕೋವಿಡ್‌ನ್ನು ಎದುರಿಸಿ ಜನರನ್ನು ಸಂಕಷ್ಟದಿಂದ ಪಾರುಮಾಡುವತ್ತ ಗಮನ ನೀಡಬೇಕು. ಸಾವು-ನೋವುಗಳನ್ನು ಕಡಿಮೆ ಮಾಡುವತ್ತ ಗಮನ ಹರಿಸೋಣ
ಅದುಬಿಟ್ಟು ಬೇರೆ ವಿಚಾರ ನನ್ನ ಮುಂದಿಲ್ಲ. ಅದು ನನ್ನ ಆಧ್ಯತೆಯೂ ಅಲ್ಲ. ನನ್ನ ಆಧ್ಯತೆ ಕೊರೊನಾ ನಿಗ್ರಹ ಎಂದರು.
ಕಾನೂನು ಹೋರಾಟ
ಮೇಕೆ ದಾಟು ಯೋಜನೆಗೆ ಸಂಬಂಧಿಸಿದಂತೆ ಹಸಿರು ನ್ಯಾಯಮಂಡಳಿ ಸಮಿತಿ ರಚಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ರಾಜ್ಯಸರ್ಕಾರ ಕಾನೂನು ಹೋರಾಟ ನಡೆಸಲಿದೆ ಎಂದರು.
ಮೇಕೆದಾಟು ಯೋಜನೆಯ ಬಗ್ಗೆ ಹಸಿರು ನ್ಯಾಯಮಂಡಳಿ ಸಮಿತಿ ರಚಿಸಿರುವುದನ್ನು ಗಂಭೀರವಾಗಿ ಪರಿಗಣಸಿದ್ದೇವೆ. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ, ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿ ಕಾನೂನು ಹೋರಾಟವನ್ನು ರಾಜ್ಯ ಮಾಡಲಿದೆ ಎಂದರು.