ನಾಯಕತ್ವ ಬದಲಾವಣೆ ಉಹಾಪೋಹ : ಆರಗ

ಬೆಂಗಳೂರು,ಆ.೪- ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬುದು ಊಹಾ-ಪೋಹ ಸರ್ಕಾರದ ಕಾರ್ಯವೈಖರಿ ಬಗ್ಗೆ ಪಕ್ಷದ ವರಿಷ್ಠರಿಗೆ ತೃಪ್ತಿ ಇದೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿಂದು ’ಹರ್ ಘರ್ ತಿರಂಗ್’ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಬೆಂಗಳೂರಿನಲ್ಲಿ ಕುಳಿತು ಏನೋ ಮಾಡುತ್ತಾರೆ ಎಂಬುದು ಸರಿಯಲ್ಲ. ಅವರ ಬಳಿಗೆ ಎಲ್ಲ ಮಾಹಿತಿ ಹೋಗುತ್ತದೆ. ಇಲ್ಲಿಗೆ ಬಂದು ಅವರು ಮಾಹಿತಿ ಪಡೆದು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಇಂದು ಬೆಳಿಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿದ್ದೆ. ಮಂಗಳೂರು ಹತ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸುದೀರ್ಘ ಚರ್ಚೆಯಾಗಿದೆ. ಎಲ್ಲವನ್ನೂ ಹೇಳಲಿಕ್ಕೆ ಆಗಲ್ಲ ಎನ್‌ಐಎ ತನಿಖೆ ಬಗ್ಗೆಯೂ ಶಾ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದರು.
ಸರ್ಕಾರದ ಕೆಲಸದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರವರ ಬಗ್ಗೆ ತೃಪ್ತಿ ಇದೆ. ನಾಯಕತ್ವ ಬದಲಾಗುತ್ತದೆ ಎಂಬುದು ಊಹಾ-ಪೋಹಗಳು, ಕಾಂಗ್ರೆಸ್ ಕಪೋಲಕಲ್ಪಿತ ಹೇಳಿಕೆಗಳನ್ನು ನೀಡುತ್ತಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಕಡತ ವಿಲೇವಾರಿ ಮಾಡುತ್ತಿಲ್ಲ ಎಂಬುದು ಸರಿಯಲ್ಲ, ಯಾವುದೇ ಕಡತಗಳು ವಿಳಂಬವಾಗುತ್ತಿಲ್ಲ. ಆಧ್ಯತೆ ಮೇರೆಗೆ ಕಡತ ನೋಡುತ್ತಿದ್ದಾರೆ. ಹಗಲು-ಇರುಳು ಸಿಎಂ ಕೆಲಸ ಮಾಡುತ್ತಿದ್ದಾರೆ. ಕೆಲಸದ ಒತ್ತಡವೂ ಇದೆ ಎಂದರು.
ರಾಜ್ಯದ ಎಲ್ಲ ತಾಲ್ಲೂಕಿನಲ್ಲೂ ಅಗ್ನಿ ಶಾಮಕ ಠಾಣೆ ಇದೆ. ೧೩೫೦ ಅಗ್ನಿಶಾಮಕ ಸಿಬ್ಬಂದಿಗಳನ್ನು ಹೊಸದಾಗಿ ನೇಮಕ ಮಾಡಿದ್ದೇವೆ. ಸುಮಾರು ೩೫ ಕೋಟಿ ರೂ. ವೆಚ್ಚದಲ್ಲಿ ಫಿನ್‌ಲ್ಯಾಂಡ್‌ನಿಂದ ಬೃಹತ್ ಕಟ್ಟಡಗಳಲ್ಲಿ ಅಗ್ನಿದುರಂತ ಸಂಭವಿಸಿದಾಗ ಜನರ ಪ್ರಾಣರಕ್ಷಣೆಗಾಗಿ ೩೫ ಕೋಟಿ ರೂ. ವೆಚ್ಚದ ಲ್ಯಾಡರ್‌ನ್ನು ಬೆಂಗಳೂರಿಗೆ ತರಿಸಲಾಗುತ್ತಿದೆ ಎಂದರು.
ಮಂಗಳೂರಿನ ಪ್ರವೀಣ್ ಮತ್ತು ಫಾಜಿಲ್ ಹತ್ಯೆ ತನಿಖೆ ನಡೆಯುತ್ತಿದೆ. ಎರಡೂ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾರು ಎಂಬುದು ಗೊತ್ತಾಗಿದೆ ಎಂದರು.