ನಾಯಕತ್ವ ಬದಲಾವಣೆ ಆರದ ಕಿಚ್ಚು

ಬೆಂಗಳೂರು,ಜೂ.೧೨- ’ಮಳೆ ನಿಂತರೂ ಹನಿ ನಿಲ್ಲಲಿಲ್ಲ’ ಎಂಬಂತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ವರಿಷ್ಠರು ಹೇಳಿದ್ದರೂ ನಾಯಕತ್ವ ಬದಲಾವಣೆಯ ಕಿಚ್ಚು ಬಿಜೆಪಿಂiiಲ್ಲಿ ಇನ್ನೂ ಆರಿಲ್ಲ. ತೆರೆಮರೆಯಲ್ಲಿ ಯಡಿಯೂರಪ್ಪ ವಿರೋಧಿ ಬಣ ಸಕ್ರಿಂiiವಾಗಿದೆ.
ನಾಯಕತ್ವ ಬದಲಾವಣೆ ಚಟುವಟಿಕೆಗಳಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುತ್ತಿರುವ ಶಾಸಕ ಅರವಿಂದ್ ಬೆಲ್ಲದ ದೆಹಲಿಗೆ ತೆರಳಿ ವರಿಷ್ಠರ ಭೇಟಿಗೆ ಮುಂದಾಗಿರುವುದು ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬರುವಂತಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ದೆಹಲಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ನಿನ್ನೆ ಹಾಸನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನು ೨ವರ್ಷ ನಾನೇ ಮುಖ್ಯಮಂತ್ರಿ, ವರಿಷ್ಠರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವೆ ಎಂದು ಹೇಳಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಶಾಸಕ ಅರವಿಂದ ಬೆಲ್ಲದ ದೆಹಲಿಗೆ ತೆರಳಿ ವರಿಷ್ಠ ನಾಯಕರ ಭೇಟಿಗೆ ಮುಂದಾಗಿರುವುದು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕಿಚ್ಚು ಆರಿಲ್ಲ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ ಎಂಬಂತೆ ಕಾಣುತ್ತಿದೆ.
ರಾಜ್ಯದಲ್ಲಿ ಇನ್ನೂ ನಾಯಕತ್ವ ಬದಲಾವಣೆ ಇಲ್ಲ. ಎಲ್ಲವೂ ತಣ್ಣಗಾಯಿತು ಎಂಬ ಹೊತ್ತಿನಲ್ಲೇ ಶಾಸಕ ಅರವಿಂದ್ ಬೆಲ್ಲದ ಅವರ ದೆಹಲಿ ಭೇಟಿ ರಾಜಕೀಯ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಸದ್ಯ ದೆಹಲಿಯಲ್ಲಿರುವ ಅರವಿಂದ್ ಬೆಲ್ಲದ ಅವರು ವರಿಷ್ಠರ ಭೇಟಿಗಾಗಿ ಕಾದು ಕುಳಿತ್ತಿದ್ದಾರೆ. ಇಂದು ಸಂಜೆ ಇಲ್ಲವೆ ನಾಳೆ ಅವರು ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಪಕ್ಷದ ಹಲವು ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಶಾಸಕ ಬೆಲ್ಲದ್ ಪದೇ ಪದೇ ದೆಹಲಿಗೆ ತೆರಳುತ್ತಿದ್ದು, ಕೆಲದಿನಗಳ ಹಿಂದೆಯಷ್ಟೇ ಸಚಿವ ಯೋಗೇಶ್ವರ್ ಜತೆ ದೆಹಲಿ ಯಾತ್ರೆ ನಡೆಸಿದ್ದರು.
ಶಾಸಕ ಅರವಿಂದ ಬೆಲ್ಲದ ಅವರ ಹಾದಿಯಲ್ಲೇ ಯಡಿಯೂರಪ್ಪ ವಿರೋಧಿ ಬಣದ ಕೆಲ ಸಚಿವರು ಹಾಗೂ ಶಾಸಕರು ವರಿಷ್ಠರನ್ನು ಭೇಟಿ ಮಾಡಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ.
ಈ ತಿಂಗಳ ೧೬ ಇಲ್ಲವೇ ೧೭ ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ರವರಿಗೆ ಈ ಸಂಬಂಧ ಮನವಿ ಮಾಡಲು ಕೆಲ ಶಾಸಕರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಅರುಣ್‌ಸಿಂಗ್‌ರವರ ರಾಜ್ಯ ಭೇಟಿ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಪರ-ವಿರೋಧ ಚಟುವಟಿಕೆಗಳು ಪರಾಕಾಷ್ಠೆಗೆ ತಲುಪುವ ಸಾಧ್ಯತೆಯೂ ಇದೆ. ಬಿಜೆಪಿಯಲ್ಲಿನ ಈ ಅಂತರ್‌ಯುದ್ಧ ವರಿಷ್ಠರು ಯಾವ ರೀತಿ ಮದ್ದು ಅರೆಯುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.

ದೆಹಲಿ ಭೇಟಿ ರಾಜಕೀಯದಲ್ಲ: ಅರವಿಂದ ಬೆಲ್ಲದ
ದೆಹಲಿ ಭೇಟಿಗೆ ರಾಜಕೀಯ ಉದ್ದೇಶವಿಲ್ಲ. ದೆಹಲಿ ಭೇಟಿ ಖಾಸಗಿ ಭೇಟಿ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದ್ದಾರೆ.
ದೆಹಲಿಗೆ ಕುಟುಂಬದ ಜತೆ ಖಾಸಗಿ ಭೇಟಿಗೆ ಬಂದಿದ್ದೇನೆ,ದೆಹಲಿ ಭೇಟಿಯ ಹಿಂದೆ ರಾಜಕೀಯ ಉದ್ದೇಶ ಇಲ್ಲ. ಪಕ್ಷದ ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗಾಗಲಿ, ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಲಿ ದೆಹಲಿಗೆ ಬಂದಿಲ್ಲ ಎಂದು ಅವರು ದೆಹಲಿಯಿಂದಲೇ ಸ್ಪಷ್ಟನೆ ನೀಡಿದ್ದಾರೆ.
ದೆಹಲಿ ಭೇಟಿಯ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಪ್ಪು ವರದಿಗಳು ಬಿತ್ತರವಾಗುತ್ತಿದೆ. ಈ ವರದಿಗಳು ಸದ್ಯಕ್ಕೆ ದೂರವಾಗಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ಬಂದಿಲ್ಲ. ಅನಗತ್ಯವಾಗಿ ದೆಹಲಿ ಭೇಟಿ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.