ನಾಯಕತ್ವ ಗೊಂದಲ, ವರಿಷ್ಠರಿಗೆ ನಿಷ್ಠರ ಮೊರೆ

ಬೆಂಗಳೂರು,ಜೂ. ೭- ಹೈ ಕಮಾಂಡ್ ಹೇಳಿದರೆ ರಾಜೀನಾಮೆ ನೀಡುತ್ತೇನೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ಫೋಟಕ ಹೇಳಿಕೆ ಬೆನ್ನಲ್ಲೆ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿ, ಪರ-ವಿರೋಧ ಚಟುವಟಿಕೆಗಳು ಬಿರುಸು ಪಡೆದಿವೆ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ವರಿಷ್ಠರು ಗೊಂದಲಗಳನ್ನು ಪರಿಹರಿಸಬೇಕು ಎಂಬ ಪ್ರಬಲ ಕೂಗು ಬಿಜೆಪಿ ಪಾಳಯದಲ್ಲಿ ಕೇಳಿ ಬಂದಿದೆ.
ಯಡಿಯೂರಪ್ಪ ನಿಷ್ಠ ಶಾಸಕರು ಯಡಿಯೂರಪ್ಪನವರ ನಾಯಕತ್ವದ ಪರ ಶಾಸಕರ ಸಹಿ ಸಂಗ್ರಹಣೆ ನಡೆಸಿದ್ದರೆ,
ವಿರೋಧಿಗಳು ಒಳಗೊಳಗೆ ಯಡಿಯೂರಪ್ಪನವರ ಪದಚ್ಯುತಿಗೆ ಹೈಕಮಾಂಡ್‌ನ ಮೇಲೆ ಒತ್ತಡ ಹೇರುವ ಕಾರ್ಯ ನಡೆಸಿದ್ದಾರೆ.
ವರಿಷ್ಠ ನಾಯಕರು ನಾಯಕತ್ವ ಬಗ್ಗೆ ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಬೇಕು, ನಾಯಕತ್ವ ಬದಲಾವಣೆಯೋ ಇಲ್ಲ ಎಂಬ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂಬ ಒತ್ತಡಗಳನ್ನು ಯಡಿಯೂರಪ್ಪ ನಿಷ್ಠ.
ಶಾಸಕರುಗಳ ಆಗ್ರಹವಾಗಿದೆ. ಹಾಗೆಯೇ ನಾಯಕತ್ವದ ವಿರುದ್ಧ ದನಿ ಎತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ನಿಷ್ಠ ಶಾಸಕರು ಒತ್ತಾಯಿಸಿದ್ದಾರೆ.
ಹೈಕಮಾಂಡ್ ಸ್ಪಷ್ಟ ನಿರ್ಧಾರ ಮಾಡದಿದ್ದರೆ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಎಂಬುದು ಶಾಸಕರ ಅಳಲಾಗಿದೆ. ರಾಜ್ಯದಲ್ಲಿ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳು ನಡೆದಿದ್ದರೂ ಹೈ ಕಮಾಂಡ್ ಮಾತ್ರ ಮಗುಂಮಾಗಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಯಡಿಯೂರಪ್ಪನವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ನಿಷ್ಟ ಶಾಸಕರು ಯಡಿಯೂರಪ್ಪನವರ ನಾಯಕತ್ವ ಬದಲಿಸಬಾರದು, ಪೂರ್ಣಾವಧಿಗೆ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಒತ್ತಾಯಿಸುವ ಪತ್ರವನ್ನು ಸಿದ್ಧಪಡಿಸಿ ಅದಕ್ಕೆ ಶಾಸಕರ ಸಹಿ ಹಾಕಿಸುವ ಕೆಲಸ ನಡೆಸಿದ್ದು, ಇದುವರೆಗೂ ೬೫ ಶಾಸಕರು ಯಡಿಯೂರಪ್ಪ ಅವರ ನಾಯಕತ್ವ ಬೆಂಬಲಿಸಿ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೈ ಕಮಾಂಡ್ ಹೇಳಿದರೆ ರಾಜೀನಾಮೆಗೆ ಸಿದ್ಧ ಎಂಬ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೆ ಅವರ ವಿರೋಧಿ ಬಣವು ಚುರುಕಾಗಿದ್ದು, ಇದು ಸುಸಂದರ್ಭ, ಯಡಿಯೂರಪ್ಪನವರೇ ರಾಜೀನಾಮೆಗೆ ಸಿದ್ದ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಅವರ ಮನವೊಲಿಸಿ ನಾಯಕತ್ವ ಬದಲಾಯಿಸಿ ಎಂದು ಯಡಿಯೂರಪ್ಪ ವಿರೋಧಿ ಬಣ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದೆ ಎಂದು ಹೇಳಲಾಗಿದೆ.
ವಿರೋಧಿ ಬಣದ ಚಟುವಟಿಕೆಗಳು ಪಕ್ಷದ ಒಳಗೊಳಗೆ ನಡೆದಿವೆ. ಯಾರೂ ಏನೂ ಬಹಿರಂಗವಾಗಿ ಮಾತನಾಡದೆ ಎಲ್ಲರೂ ಹೈಕಮಾಂಡ್ ಹೇಳಿಕೆಗೆ ಬದ್ಧ ಎಂಬ ಸಿದ್ಧ ಉತ್ತರವನ್ನೇ ನೀಡುತ್ತಿರುವುದು ಬಿಜೆಪಿಯಲ್ಲಿ ಮುಂದೆ ಯಾವ ರೀತಿಯ ಬೆಳವಣಿಗೆಗಳು ಆಗಬಹುದು ಎಂಬ ಸುಳಿವನ್ನು ನೀಡಿವೆ. ಇಷ್ಟೆಲ್ಲದ್ದರ ಮಧ್ಯೆ ಯಡಿಯೂರಪ್ಪನವರ ನಿಷ್ಠ ಶಾಸಕರು ಗಟ್ಟಿ ಧ್ವನಿಯಲ್ಲಿ ಯಡಿಯೂರಪ್ಪನವರ ಪರ ಹೇಳಿಕೆ ನೀಡಿ ಭಿನ್ನರ ವಿರುದ್ಧ ಕೆಂಡಕಾರಿದ್ದಾರೆ. ಹಾಗಾಗಿ, ಸದ್ಯಕ್ಕಂತೂ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತುಗಳು ನಿಲ್ಲುವಂತೆ ಕಾಣುತ್ತಿಲ್ಲ.
ಯಡಿಯೂರಪ್ಪನವರ ನಿಷ್ಠ ಶಾಸಕರ ಗುಂಪಿನಲ್ಲಿ ಮುಂಚೂಣಿಯಲ್ಲಿರುವ ಶಾಸಕ ರೇಣುಕಾಚಾರ್ಯ ಅವರು ಈ ಸಹಿ ಸಂಗ್ರಹಣೆಯ ನೇತೃತ್ವ ವಹಿಸಿದ್ದು, ಇಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಹಿ ಸಂಗ್ರಹಣೆ ಇವೆಲ್ಲ ಬೇಡ, ಸದ್ಯಕ್ಕೆ ಸುಮ್ಮನ್ನಿರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರೇಣುಕಾಚಾರ್ಯ ಅವರಿಗೆ ಹೇಳಿದ್ದಾರೆ ಎನ್ನಲಾಗಿದ್ದು, ಆದರೂ ಶಾಸಕರ ಈ ಸಹಿ ಸಂಗ್ರಹಣೆ ಮುಂದುವರೆದಿವೆ. ಹಾಗೆಯೇ
ದೆಹಲಿ ಮಟ್ಟದಲ್ಲಿ ಯಡಿಯೂರಪ್ಪ ವಿರೋಧಿ ಬಣ ಚುರುಕಾಗಿವೆ. ಈ ಹಿನ್ನೆಲೆಯಲ್ಲಿ ಹೈ ಕಮಾಂಡ್‌ನ ತೀರ್ಮಾನ ಏನು ಎಂಬುದು ಕುತೂಹಲ ಮೂಡಿಸಿದೆ.

ಅರುಣ್‌ಸಿಂಗ್ ರಾಜ್ಯಕ್ಕೆ
ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆಯಿಂದ ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲದ್ದಕ್ಕೂ ಮದ್ದು ಅರಿಯಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಮೂಲಕ ಹೈ ಕಮಾಂಡ್‌ನ ಸಂದೇಶವನ್ನು ಮುಟ್ಟಿಸಲು ಮುಂದಾಗಿದೆ.
ದೆಹಲಿಯಲ್ಲಿ ನಿನ್ನೆ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಭೆ ನಡೆಸಿದ್ದು, ಈ ಸಭೆಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದು, ಒಂದು ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದು, ಅದನ್ನು ಯಡಿಯೂರಪ್ಪನವರಿಗೆ ಮುಟ್ಟಿಸಲು ಅರುಣ್‌ಸಿಂಗ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಅರುಣ್‌ಸಿಂಗ್ ಇನ್ನು ೨-೩ ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಚರ್ಚೆ ನಡೆಸುವರು.