ಸಂಜೆವಾಣಿ ವಾರ್ತೆ
ಶಿವಮೊಗ್ಗ.ಅ.೨೬: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸಮಾಜಮುಖಿ ಸೇವಾ ಮನೋಭಾವ ಬೆಳೆಸಿಕೊಂಡು ದೇಶದ ಸದೃಢ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ನಾಗರಾಜ್ ಹೇಳಿದರು.ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಹಾಗೂ ಮಲ್ನಾಡ್ ಓಪನ್ ಗ್ರೂಪ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಂಬೂರೀ ಆನ್ ದಿ ಏರ್ ( ಜೋಟ) ಮತ್ತು ಜಂಬೂರೀ ಆನ್ ದಿ ಇಂಟರ್ನೆಟ್ ( ಜೋಟಿ ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರು ಪ್ರೇರೆಪಿಸಬೇಕು. ಉತ್ತಮ ವ್ಯಕ್ತಿತ್ವ, ನಾಯಕತ್ವ ಗುಣ ಸೇರಿದಂತೆ ಸಮಾಜದ ಪ್ರಗತಿಗೆ ಕಾರಣ ಆಗುತ್ತಾರೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಕ್ತ (ಸ್ಕೌಟ್) ಕೆ.ಪಿ.ಬಿಂದು ಕುಮಾರ್ ಮಾತನಾಡಿ, ಸಂವಹನ ಕ್ಷೇತ್ರದಲ್ಲಿ ತಾಂತ್ರಿಕ ಪರಿಣಿತಿ, ಇತರ ಹ್ಯಾಮ್ ರೇಡಿಯೋ ಆಪರೇಟರ‍್ಸ್ ಗಳೊಂದಿಗೆ ಚರ್ಚೆ, ಆಂಟೆನ್ನಾ ಅಭಿವೃದ್ಧಿ, ಉಪಗ್ರಹದ ಮೂಲಕ ಸಂವಹನ, ವಿಕೋಪಗಳಲ್ಲಿ ಸೇವೆ ಮುಂತಾದ ಉತ್ತಮ ಅಂಶ ಒಳಗೊಂಡ ಹ್ಯಾಮ್ ರೇಡಿಯೋದ ಸದಸ್ಯರಾಗಬೇಕು ಎಂದು ಹೇಳಿದರು.ಅಂತರ ರಾಷ್ಟ್ರೀಯ ಸ್ಕೌಟ್ ಗೈಡ್ ಸಂಸ್ಥೆ 60 ವರ್ಷಕ್ಕೂ ಮೇಲ್ಪಟ್ಟು ಆಚರಿಸುತ್ತಿರುವ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶದ ಇತರ ಜಾಗದಲ್ಲಿ ಹಾಗೂ ವಿದೇಶದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳೊಂದಿಗೆ ಉತ್ತಮ ಸಂವಹನ ಮಾಡಬೇಕು ಎಂದು ತಿಳಿಸಿದರು.ಹ್ಯಾಮ್ ರೇಡಿಯೋ ಆಪರೇಟರ್ ಹಾಗೂ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ವಿ ಅವಲಕ್ಕಿ ಪ್ರಾಸ್ತಾವಿಕ ಮಾತನಾಡಿ, ಹ್ಯಾಮ್ ರೇಡಿಯೋದ ಬಗ್ಗೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಜೋಟ ಮತ್ತು ಜೋಟಿ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಮುಖ್ಯ ಆಯುಕ್ತ ಹೆಚ್ ಡಿ ರಮೇಶ್ ಶಾಸ್ತ್ರೀ ಬ್ರೆಜಿಲ್ ದೇಶದ ಮಕ್ಕಳೊಂದಿಗೆ ಸಂಪರ್ಕಿಸಿ ಮಾತನಾಡಿದರು. ಹಾಜರಿದ್ದ ಎಲ್ಲಾ ಸದಸ್ಯರಿಗೆ ಶುಭಾಶಯಗಳನ್ನು ಕೋರಿದರು. ನಗರದ ಸಹ್ಯಾದ್ರಿ ಕಾಲೇಜು, ಮಲೆನಾಡು ಮುಕ್ತದಳ ಮತ್ತು ಇತರ ಶಾಲೆ ಕಾಲೇಜಿನ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಭಾರತಿ ಡಯಾಸ್ ಸ್ವಾಗತಿಸಿ ನಿರೂಪಿಸಿದರು. ಸಹಾಯಕ ಜಿಲ್ಲಾ ಆಯುಕ್ತ ಶ್ರೀನಿವಾಸ್ ವರ್ಮಾ ವಂದಿಸಿದರು. ಹ್ಯಾಮ್ ಆಪರೇಟರ್ ಮತ್ತು ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ಘನಶ್ಯಾಮ್ ಗಿರಿಮಾಜಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್, ಮಲ್ಲಿಕಾರ್ಜುನ ಕಾನೂರ್ ಉಪಸ್ಥಿತರಿದ್ದರು.