
ಕಲಬುರಗಿ:ಮಾ.4: ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಜೀವನ ಶೈಲಿಯ ಮಹತ್ವ ಕುರಿತು ಮನವರಿಕೆ ಮಾಡಿಕೊಡುವುದರ ಜೊತೆಗೆ ಅವರಲ್ಲಿ ನಾಯಕತ್ವ ಗುಣ ಬಿತ್ತುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ಆಶಯ ಎಂದು ಗೈಡ್ ವಿಭಾಗದ ಜಿಲ್ಲಾ ಆಯುಕ್ತರಾದ ಸುಜಾತಾ ಇ.ಮುಲ್ಲಾ ತಿಳಿಸಿದರು.
ಇಲ್ಲಿನ ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತ ಸ್ಕೌಟ್ಸ್-ಗೈಡ್ಸ್ ಶಾಲಾ ಹಂತದ ನಾಯಕತ್ವ ಶಿಬಿರದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಾಕಷ್ಟು ಮಾನಸಿಕ ಮತ್ತು ದೈಹಿಕ ಶಕ್ತಿ ಇರುತ್ತದೆ. ಈ ಶಕ್ತಿಯನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತಾ ಸಮಾಜಮುಖಿಯಾಗಿ ಬದುಕಬೇಕು ಎಂಬುದನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸಿಕೊಡುತ್ತದೆ ಎಂದರು.
ನಮ್ಮೊಳಗೆ ಒಬ್ಬ ನಾಯಕ ರೂಪುಗೊಳ್ಳಬೇಕಾದರೆ ಮೊದಲು ಇತರರಿಗೆ ಮಾದರಿ ಎನಿಸುವಂತಹ ವ್ಯಕ್ತಿತ್ವ ರೂಢಿಸಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅಗತ್ಯವಾದ ಶಿಸ್ತು ಮತ್ತು ಸಮಯಬದ್ಧತೆಯನ್ನು ಕಲಿಯಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ಕೌಟ್ಸ್ ವಿಭಾಗದ ಜಿಲ್ಲಾ ತರಬೇತಿ ಆಯುಕ್ತ ಅಮರೇಶ್ ಕೋರಿ ಅವರು ಮಾತನಾಡಿ, ದುರ್ಬಲರನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ತನ್ನ ಬದ್ಧತೆ ಪ್ರದರ್ಶಿಸಬೇಕಾಗುತ್ತದೆ. ಇಂತಹ ಬದ್ಧತೆಯನ್ನು ರೂಢಿಸಿಕೊಂಡ ವಿದ್ಯಾರ್ಥಿಗಳು ಭವಿಷ್ಯದ ಆಸ್ತಿಯಾಗುತ್ತಾರೆ ಎಂದು ನುಡಿದರು.
ಯಾದಗಿರಿ ವಿಭಾಗದ ಕಾರ್ಯದರ್ಶಿ ರಾಜೇಂದ್ರ ಮಾತನಾಡಿದರು. ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳಿಗೆ ಸುಜಾತಾ ಇ. ಮುಲ್ಲಾ ಮತ್ತು ಅಮರೇಶ್ ಕೋರಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ವಿವೇಕಾನಂದ ವಿದ್ಯಾ ನಿಕೇತನ ಶಾಲೆ ಪ್ರಾಂಶುಪಾಲರಾದ ಸುವರ್ಣ ಎಸ್.ಭಗವತಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸ್ಕೌಟ್ಸ್ ಮಾಸ್ಟರ್ ಮೌನೇಶ್ ಎಚ್.ಕೆ. ಮತ್ತು ಗೈಡ್ ವೇದಾವತಿ ಅಲ್ಲಂಪಲ್ಲಿ ವೇದಿಕೆಯಲ್ಲಿದ್ದರು.
ಶಾಲೆಯ ಸಮನ್ವಯಾಧಿಕಾರಿಗಳಾದ ಸುಮಾ ಎಸ್.ಭಗವತಿ ಹಾಗೂ ಸುಷ್ಮಾ ಎಸ್.ಭಗವತಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎ.ವಿ.ಪಾಟೀಲ್ ಸ್ವಾಗತಿಸಿದರು. ಇಂಗ್ಲಿಷ್ ಶಿಕ್ಷಕ ಆನಂದ ನಿರೂಪಿಸಿದರು. ಗಣಿತ ಶಿಕ್ಷಕಿ ಮಮತಾ ವಂದಿಸಿದರು.
ಮೌಲ್ಯಗಳಿಗೆ ಒತ್ತು ನೀಡಿ
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದರೆ ಮೊದಲು ಶಿಸ್ತುಬದ್ಧ ಜೀವನಕ್ಕೆ ಒತ್ತು ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಪಾತ್ರ ವಹಿಸುತ್ತದೆ ಎಂದು ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಸಂಸ್ಥಾಪಕ ಸಿದ್ಧಪ್ಪ ಭಗವತಿ ಕಿವಿಮಾತು ಹೇಳಿದರು.
ಕೇವಲ ವೈಯಕ್ತಿಕ ಹಿತಾಸಕ್ತಿಗಾಗಿ ಬದುಕದೆ ಸಮಾಜದ ಹಿತಕ್ಕಾಗಿ ಬದುಕುವ ವ್ಯಕ್ತಿ ಸಮರ್ಥ ನಾಯಕ ಎನಿಸಿಕೊಳ್ಳುತ್ತಾನೆ. ಸ್ಕೌಟ್ಸ್ ಮತ್ತು ಗೈಡ್ಸ್ ಇಂತಹ ನಾಯಕತ್ವದ ಗುಣವನ್ನು ಕಲಿಸುತ್ತದೆ ಎಂದರು.
ಧ್ವಜ ಶಿಷ್ಟಾಚಾರ ಪ್ರಾತ್ಯಕ್ಷಿಕೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ಶಿಷ್ಟಾಚಾರ ಕುರಿತು ನಡೆದ ಪ್ರಾತ್ಯಕ್ಷಿಕೆಯಲ್ಲಿ ಸ್ಕೌಟ್ಸ್ ವಿಭಾಗದ ಜಿಲ್ಲಾ ತರಬೇತಿ ಆಯುಕ್ತ ಅಮರೇಶ್ ಕೋರಿ ಮಾಹಿತಿ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ್ ಪಾಲ್ಗೊಂಡಿದ್ದರು.