ನಾಯಕತ್ವ ಗುಣಕ್ಕೆ ವಿದ್ಯಾರ್ಥಿ ಸಂಸತ್ತು ಸಹಕಾರಿ

ಶಹಾಬಾದ್:ಜೂ.29:ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಶಾಲೆಗಳಲ್ಲಿ ವಿದ್ಯಾರ್ಥಿ ಸಂಸತ್ತು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಅವರು ಹೇಳಿದರು. ನಗರದ ಎಮ್‍ಸಿಸಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಕಾರ್ಯಕ್ರಮವನ್ನು ಅವರು ಚಾಲನೆ ನೀಡಿ ಮಾತನಾಡಿದರು.

ಶಾಲೆಗಳಲ್ಲಿ ಸಂಸತ್ತು ರಚನೆ ಮಾಡಿ ಶಿಸ್ತ್ರು, ಸಂಯಮ, ಸಮಯ ಪ್ರಜ್ಞೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವ ಕೆಲಸ ಒಳ್ಳೆಯದು. ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗಕ್ಕೆ ಮುಂದಾಗಬೇಕು, ತಾಲೂಕಿನಲ್ಲಿ ಎಮ್‍ಸಿಸಿ ಶಾಲೆಯ ಶೇ 100% ಫಲಿತಾಂಶ ಪಡೆದು ಜಿಲ್ಲಾ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು ತುಂಬ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.

ಮುಖ್ಯಗುರು ಸಿಸ್ಟರ್ ಲಿನೆಟ್ ಸಿಕ್ವೇರಾ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲೇ ಸರ್ಕಾರ ಹಾಗೂ ಮಂತ್ರಿ ಮಂಡಲ ಕುರಿತು ತಿಳಿದುಕೊಳ್ಳಬೇಕು. ಶಾಲೆಯ ವಿದ್ಯಾರ್ಥಿ ಸರ್ಕಾರದಲ್ಲಿ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಹೇಳಿದರು.

ಎಂಸಿಸಿ ಶಾಲೆಯ ನಿವೃತ ದೈಹಿಕ ಶಿಕ್ಷಕ ಭಾಸ್ಕರ ಅವರು ಶಾಲೆಯ ಧ್ವಜಾರೋಹಣವನ್ನು ಮಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುನೀಲ ಭಗತ ಅವರು ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ನೀಡಿದರು. ಶಿಕ್ಷಣ ಸಂಯೋಜಕ ಸಂತೋಷ, ಶಿಕ್ಷಕಿ ಸಿಸ್ಟರ್ ರಿಷಿಕ ರೋಸ್, ಅನಿತಾ ಕುಲಕರ್ಣಿ ಅವರು ವೇದಿಕೆಯಲ್ಲಿದ್ದರು. ಕಾಯಕ್ರಮದಲ್ಲಿ ಸಿಆರ್‍ಪಿ ಸತ್ಯನಾರಾಯಣ ವಿಶ್ವಕರ್ಮ, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು.