ನಾಯಕತ್ವದ ಚೆಂಡು ವರಿಷ್ಠರ ಅಂಗಳಕ್ಕೆ

ಬೆಂಗಳೂರು,ಜೂ.೧೮- ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚೆಂಡು ಈಗ ಹೈ ಕಮಾಂಡ್ ಅಂಗಳದಲ್ಲಿದೆ. ನಾಯಕತ್ವ ಬದಲಿಸಬೇಕೋ ಬೇಡವೋ ಎಂಬ ಬಗ್ಗೆ ವರಿಷ್ಠರೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನೀಡುವ ವರದಿಯಾಧರಿಸಿ ತೀರ್ಮಾನಗಳು ಆಗಲಿವೆ ಎಂದು ಬಿಜೆಪಿಯ ಮೂಲಗಳು ಹೇಳಿವೆ.
ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ, ನಾಯಕತ್ವ ಬದಲಾವಣೆ ಬಿಕ್ಕಟ್ಟಿನ ಬಗ್ಗೆ ಸಚಿವರು, ಶಾಸಕರುಗಳ ಸರಣಿ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಕೋರ್‌ಕಮಿಟಿ ಸಭೆಯ ನಂತರ ಇಂದು ರಾತ್ರಿ ದೆಹಲಿಗೆ ಮರಳಿ ಇನ್ನು ೨-೩ ದಿನಗಳಲ್ಲಿ ಪಕ್ಷದ ವರಿಷ್ಠರಿಗೆ ವರದಿ ನೀಡಲಿದ್ದು, ಈ ವರದಿಯಾಧರಿಸಿ ವರಿಷ್ಠರು ನಾಯಕತ್ವ ಬದಲಾವಣೆ ಬೇಕೋ ಬೇಡವೋ ಎಂಬ ತೀರ್ಮಾನ ಕೈಗೊಳ್ಳುವರು.
ಬಿಜೆಪಿಯ ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಉನ್ನತ ಮಟ್ಟದ ಸಮಿತಿಯಾದ ಸಂಸದೀಯ ಮಂಡಳಿ ಸಭೆಯಲ್ಲಿ ರಾಜ್ಯದ ಬಿಜೆಪಿಯಲ್ಲಿನ ಆಗು-ಹೋಗುಗಳ ಗ್ಗೆ ಅರುಣ್‌ಸಿಂಗ್ ನೀಡುವ ವರದಿಯ ಬಗ್ಗೆ ಚರ್ಚೆಗಳು ನಡೆಯಲಿವೆ.
ಈ ಸಭೆಯಲ್ಲೇ ರಾಜ್ಯದ ನಾಯಕತ್ವ ಬದಲಾಗಬೇಕೋ, ಯಡಿಯೂರಪ್ಪನವರನ್ನೇ ಮುಂದುವರೆಸಬೇಕೋ ಎಂಬ ಬಗ್ಗೆ ತೀರ್ಮಾನ ಆಗುತ್ತದೆ ಎಂದು ಮೂಲಗಳು ವಿವರಿಸಿವೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂಬಂಧ ನಿರ್ಧಾರ ಕೈಗೊಳ್ಳಲು ಈ ತಿಂಗಳ ೨೪ ರಂದು ಬಿಜೆಪಿಯ ಸಂಸದೀಯ ಮಂಡಳಿ ಸಭೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿದ್ದು, ಈ ಸಭೆಯಲ್ಲೇ ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆಯೂ ತೀರ್ಮಾನಗಳು ಆಗುತ್ತದೆ ಎಂದು ಹೇಳಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ಈಗ ನಡೆದಿರುವ ವಿದ್ಯಮಾನಗಳು ವರಿಷ್ಠರಿಗೆ ಅಸಮಾಧಾನ ಮೂಡಿಸಿದೆ. ಬಹಳ ದಿನ ಹೀಗೆ ಬಿಟ್ಟರೆ ಪಕ್ಷದ ವರ್ಚಸ್ಸಿಗೆ ಹಾನಿಯಾಗುವುದು ನಿಶ್ಚಿತ. ಹಾಗಾಗಿ, ಆದಷ್ಟು ಬೇಗ ರಾಜ್ಯದ ವಿಚಾರದಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿ ಹೊಂದಿರುವ ರಾಜ್ಯದ ಹಿರಿಯ ನಾಯಕರೊಬ್ಬರು ಹೇಳಿದರು.
ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನದ ಮೇಲೆ ರಾಜ್ಯ ಬಿಜೆಪಿಯಲ್ಲಿನ ಮುಂದಿನ ಆಗು-ಹೋಗುಗಳು ನಿರ್ಧಾರವಾಗಲಿವೆ.

ಕೋರ್ ಕಮಿಟಿ ಸಭೆ
ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅರುಣ್‌ಸಿಂಗ್ ರವರು ಸಚಿವರು, ಶಾಸಕರುಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಪ್ರಮುಖ ಮುಖಂಡರೆದುರು ಪ್ರಸ್ತಾಪಿಸಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುವಂತೆ ಸಲಹೆ ಮಾಡುವರು ಎನ್ನಲಾಗಿದೆ.
ಬಿಜೆಪಿಯಲ್ಲಿನ ಆಗು-ಹೋಗುಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಎಲ್ಲ ಮುಖಂಡರ ಅಭಿಪ್ರಾಯಗಳನ್ನು ಆಲಿಸಲಿರುವ ಅರುಣ್‌ಸಿಂಗ್, ಕೋರ್‌ಕಮಿಟಿ ಸಭೆ ಮುಗಿಸಿಕೊಂಡು ಇಂದು ರಾತ್ರಿಯೇ ದೆಹಲಿಗೆ ವಾಪಸ್ಸಾಗುವರು.

ಇಂದು ಮುಂದುವರೆದ ಸಭೆ
ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಕಳೆದ ೩ ದಿನಗಳಿಂದ ಸರಣಿ ಸಭೆ ನಡೆಸಿರುವ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಇಂದು ಪಕ್ಷದ ಕಚೇರಿಯಲ್ಲಿ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಮಹೇಶ್ ಟೆಂಗಿನಕಾಯಿ, ಸಿದ್ದರಾಜು, ಅಶ್ವತ್ಥ ನಾರಾಯಣ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಪಾಲ್ಗೊಂಡಿದ್ದರು.