ನಾಮಪತ್ರ ಹಿಂಪಡೆದು ಫೋನ್ ಸ್ವಿಚ್ ಆಫ್ ಮಾಡಿದ ಹೊನ್ನಾಳಿ ಜೆಡಿಎಸ್ ಅಭ್ಯರ್ಥಿ

ದಾವಣಗೆರೆ.ಏ.೨೬; ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವಮೂರ್ತಿ ಗೌಡ  ಪಕ್ಷದ ಮುಖಂಡರಿಗೆ ತಿಳಿಸದೆ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಫೋನ್ ಸ್ವಿಚ್ಡ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನ್ಯಾಮತಿ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ, ಹೊನ್ನಾಳಿ ಘಟಕದ ಕಾರ್ಯದರ್ಶಿ ರಮೇಶ್ , ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವಮೂರ್ತಿ ಗೌಡ ಅವರು ನಮ್ಮನ್ನು ಕೇಳದೆ ನಾಮಪತ್ರವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಈಗ ಫೋನ್ ಸ್ವಿಚ್ಡ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಯಾವ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಗೊತ್ತಿಲ್ಲ. ಹಣದ ಆಮಿಷಕ್ಕೆ ಬಲಿಯಾಗಿ ಜೆಡಿಎಸ್ ಕಾರ್ಯಕರ್ತರಿಗೆ ಕೈ ಕೊಟ್ಟು ಓಡಿಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.ಶಿವಮೂರ್ತಿ ಅವರು ನಮ್ಮ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಅನ್ಯಾಯ ಮಾಡಿ ಹೋಗಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದ ಶಿವಮೂರ್ತಿ ಗೌಡ ಹಾಗೂ ತಾಲೂಕು ಅಧ್ಯಕ್ಷರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದರು.ತಾಲೂಕಿನಲ್ಲಿ ಸಂಘಟನೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೆವು. ಇಂತಹ ಅಭ್ಯರ್ಥಿಗೆ ಬಿ ಫಾರಂ ಕೊಡಿಸಿದ್ದು ನಮಗೆ ಮುಖಭಂಗವಾಗಿದೆ. ನಮ್ಮ ಜಿಲ್ಲಾಧ್ಯಕ್ಷರಿಗೂ ಹಾಗೂ ರಾಜ್ಯ ಅಧ್ಯಕ್ಷರಿಗೂ ನಾವು ಈ ವಿಷಯವನ್ನು ತಿಳಿಸುತ್ತೇವೆ ಎಂದರು.