
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.15 :- ಚುನಾವಣಾ ನಾಮಪತ್ರ ಪ್ರಕ್ರಿಯೆ ಏಪ್ರಿಲ್ 13ರಿಂದ ಪ್ರಾರಂಭವಾಗಿದ್ದು ನಾಮಪತ್ರ ಸಲ್ಲಿಕೆಗೆ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3ಗಂಟೆವರೆಗೆ ಮಾತ್ರ ಅವಕಾಶವಿದ್ದು ಚುನಾವಣಾಧಿಕಾರಿ ಬಳಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಹಾಗೂ ಇತರೆ ನಾಲ್ಕು ಜನರಿಗೆ ಮಾತ್ರ ಅವಕಾಶವಿದೆ ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಈರಣ್ಣ ಬಿರಾದಾರ್ ತಿಳಿಸಿದರು.
ಅವರು ಗುರುವಾರ ಬೆಳಿಗ್ಗೆ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಕೂಡ್ಲಿಗಿ ಕ್ಷೇತ್ರದ ಎಲ್ಲಾ ಗ್ರಾಮಪಂಚಾಯಿತಿ ಮಟ್ಟದಲ್ಲಿ ಚುನಾವಣಾ ನೀತಿ ಸಂಹಿತೆ ಕುರಿತಾಗಿ ಈಗಾಗಲೇ ಮಾಹಿತಿ ನೀಡಲಾಗಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಾಮಪತ್ರ ಸಲ್ಲಿಸಲು ಆಗಮಿಸುವ ಅಭ್ಯರ್ಥಿಗಳು ಜನಸಮೂಹ, ಅವರು ಬಳಸುವ ಪಕ್ಷದ ಚಿಹ್ನೆಯ ಬಾವುಟ ಹಾಗೂ ಇತರೆ ಬಳಕೆಯ ವೆಚ್ಚವನ್ನು ಸ್ಪರ್ದಿಸುವ ಅಭ್ಯರ್ಥಿ ಖರ್ಚು ವೆಚ್ಚದಲ್ಲಿ ಹಾಕಲಾಗುತ್ತದೆ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕೇವಲ 5 ಜನರಿಗೆ ಮಾತ್ರ ಅವಕಾಶವಿದ್ದು 100ಮೀಟರ್ ವ್ಯಾಪ್ತಿಯಲ್ಲಿ ಕೇವಲ ಮೂರು ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಒಬ್ಬ ಅಭ್ಯರ್ಥಿ 40ಲಕ್ಷ ರೂ ಖರ್ಚಿಗೆ ಅವಕಾಶವಿದೆ ಎಂದು ತಿಳಿಸಿದರು ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗಿದೆ ನೀತಿಸಂಹಿತೆ ಉಲ್ಲಂಘನೆಯಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಈರಣ್ಣ ಬಿರಾದಾರ್ ತಿಳಿಸಿದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಸಹಾಯಕ ಸಿಬ್ಬಂದಿಗಳು ಉಪಸ್ಥಿತರಿದ್ದರು.