ನಾಮಪತ್ರ ಸಲ್ಲಿಸಲು ನ.23 ಕೊನೆಯ ದಿನ: ಜಿಲ್ಲಾಧಿಕಾರಿ

ಧಾರವಾಡ, ನ.16: ಕರ್ನಾಟಕ ವಿಧಾನ ಪರಿಷತ್ತಿಗೆ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ಜರುಗುವ ಚುನಾವಣೆಗೆ ನವೆಂಬರ್ 16 ರಂದು ಅಧಿಸೂಚನೆ ಪ್ರಕಟಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆಯ ದಿನವಾಗಿದೆ ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. 

ಕರ್ನಾಟಕ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರಕ್ಕೆ ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರವು ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನು ಒಳಗೊಂಡಿದ್ದು, ಚುನಾವಣಾ ಅಧಿಸೂಚನೆಯು ಪ್ರಕಟಿಸಲಿದ್ದು, ನವೆಂಬರ್ 23 ರ ವರೆಗೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ತಾತ್ಕಾಲಿಕ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಆರಂಭಿಸಲಾಗಿದ್ದು, ಅಲ್ಲಿಯೇ ನಾಮಪತ್ರಗಳನ್ನು ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 16 ರಂದು ಅಧಿಸೂಚನೆ ಪ್ರಕಟಿಸಿ ನವೆಂಬರ್ 23 ರ ವರಗೆ ನಾಮಪತ್ರ ಸ್ವೀಕರಿಸಲಾಗುವುದು. ನ.24 ರಂದು ನಾಮಪತ್ರಗಳ ಪರಿಶೀಲನೆ ಜರುಗುವುದು. ನ.26 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.  ಡಿಸೆಂಬರ್ 10 ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಜರುಗಲಿದೆ. ಡಿಸೆಂಬರ್ 14 ರಂದು ಮತಗಳ ಎಣಿಕೆ ಜರುಗಿ ಫಲಿತಾಂಶ ಪ್ರಕಟವಾಗಲಿದೆ ಮತ್ತು ಡಿಸೆಂಬರ್ 16 ಕ್ಕೆ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾಗುತ್ತವೆ ಎಂದು ಅವರು ತಿಳಿಸಿದರು.

 ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ವ್ಯಾಪ್ತಿಯ ಎಲ್ಲ ಗ್ರಾಮಪಂಚಾಯತ್ ಹಾಗೂ ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ ಮತ್ತು ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ಹೇಳಿದರು.

ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಈಗಾಗಲೇ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯ ಅನುಗುಣವಾಗಿ ಒಟ್ಟು 7503 ಜನ ಮತದಾರರಿದ್ದಾರೆ. ಮತದಾನಕ್ಕಾಗಿ ಮೂರು ಜಿಲ್ಲೆಗಳು ಸೇರಿ ಒಟ್ಟು 504 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಧಾರವಾಡ ಜಿಲ್ಲೆಯಲ್ಲಿ ಒಟ್ಟು 144 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು 2165 ಮತದಾರರಿದ್ದು, ಇದರಲ್ಲಿ 1054 ಪುರುಷ ಮತ್ತು 1111 ಮಹಿಳಾ ಮತದಾರರಿದ್ದಾರೆ. ಗದಗ ಜಿಲ್ಲೆಯಲ್ಲಿ 130 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು 1969 ಜನ ಮತದಾರರಿದ್ದು, ಇದರಲ್ಲಿ 969 ಪುರುಷ ಮತ್ತು 1000 ಮಹಿಳಾ ಮತದಾರರಿದ್ದಾರೆ ಹಾಗೂ ಹಾವೇರಿ ಜಿಲ್ಲೆಯಲ್ಲಿ 230 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು 3369 ಮತದಾರರಿದ್ದು, ಇದರಲ್ಲಿ 1636 ಪುರುಷ ಹಾಗೂ 1733 ಮಹಿಳಾ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮೂರು ಜಿಲ್ಲೆಯ ಎಲ್ಲ ತಾಲೂಕಾ ಕಚೇರಿಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ನಡೆಸಲಾಗುವುದು.  ಮತದಾನದ ನಂತರ ಡಿಸೆಂಬರ್ 14 ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು. 

ಚುನಾವಣಾ ಆಯೋಗದ ನಿರ್ದೇಶನ ಹಾಗೂ ಆದೇಶಗಳ ಅನ್ವಯ ವಿಧಾನ ಪರಿಷತ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತ್ತು ನ್ಯಾಯಯುತ ಚುನಾವಣಾ ಕಾರ್ಯ ಜರುಗಲು ಅಗತ್ಯವಿರುವ ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಚುನಾವಣಾ ತಹಶೀಲ್ದಾರ್ ಹೆಚ್.ಎನ್. ಬಡಿಗೇರ ಉಪಸ್ಥಿತರಿದ್ದರು.