ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ: ಜಿಲ್ಲಾಧಿಕಾರಿ

ಧಾರವಾಡ, ಏ.13: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಗೆ ಸಂಬಂಧಿಸಿದಂತೆ ನಾಮಪತ್ರಗಳ ಸಲ್ಲಿಕೆ ಕಾರ್ಯವು ಇಂದಿನಿಂದ ಆರಂಭವಾಗಲಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

ಈ ಕುರಿತು ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ನಾಮಪತ್ರ ಸಲ್ಲಿಕೆಯು ರಜಾದಿನಗಳನ್ನು ಹೊರತುಪಡಿಸಿ ಏ.20 ರ ವರೆಗೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸುವ ಅಭ್ಯರ್ಥಿಯು ತನ್ನೊಂದಿಗೆ ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಬರಲು ಅವಕಾಶವಿದೆ. ಅಭ್ಯರ್ಥಿ ಸೇರಿ ಒಟ್ಟು 5 ಜನ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿರಬಹುದು ಎಂದು ಅವರು ಹೇಳಿದರು.   

ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 13 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಏ.20 ರಂದು ನಾಮನಿರ್ದೇಶನಗಳನ್ನು ಮಾಡುವ ಕೊನೆಯ ದಿನವಾಗಿದ್ದು, ನಾಮ ನಿರ್ದೇಶನಗಳ ಪರಿಶೀಲನೆ ಮಾಡುವ ದಿನ ಏ.21 ಆಗಿರುತ್ತದೆ. ಅಭ್ಯರ್ಥಿಯು ಹೆಸರನ್ನು ಹಿಂತೆಗೆದುಕೊಳ್ಳುವ ದಿನ ಏ.24, ಮತದಾನ ಮೇ.10, ಮತ ಎಣಿಕೆಯ ದಿನ ಮೇ 13, ಚುನಾವಣೆಯು ಮೇ.15 ರಂದು ಮುಕ್ತಾಯಗೊಳ್ಳುವುದು ಎಂದು ಅವರು ತಿಳಿಸಿದರು.

ಚುನಾವಣಾಧಿಕಾರಿಗಳು ಹಾಗೂ ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳದ ವಿವರ:

69-ನವಲಗುಂದ ವಿಧಾನಸಭಾ ಮತಕ್ಷೇತ್ರ : ಚುನಾವಣಾಧಿಕಾರಿಗಳು, ತಹಶೀಲ್ದಾರ ಕಚೇರಿ, ನವಲಗುಂದ
70-ಕುಂದಗೋಳ ವಿಧಾನಸಭಾ ಮತಕ್ಷೇತ್ರ : ಚುನಾವಣಾಧಿಕಾರಿಗಳು, ತಹಶೀಲ್ದಾರ ಕಚೇರಿ, ಕುಂದಗೋಳ
71-ಧಾರವಾಡ ವಿಧಾನಸಭಾ ಮತಕ್ಷೇತ್ರ : ಚುನಾವಣಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಕಚೇರಿ, ಧಾರವಾಡ
72-ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ : ಚುನಾವಣಾಧಿಕಾರಿಗಳು, ತಹಶೀಲ್ದಾರ ಕಚೇರಿ, ಹುಬ್ಬಳ್ಳಿ
73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ : ಚುನಾವಣಾಧಿಕಾರಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಹುಬ್ಬಳ್ಳಿ
74-ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ: ಚುನಾವಣಾಧಿಕಾರಿಗಳು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಧಾರವಾಡ
75-ಕಲಘಟಗಿ ವಿಧಾನಸಭಾ ಮತಕ್ಷೇತ್ರ : ಚುನಾವಣಾಧಿಕಾರಿಗಳು ತಹಶೀಲ್ದಾರ ಕಚೇರಿ, ಕಲಘಟಗಿ