ನಾಮಪತ್ರ ಸಲ್ಲಿಕೆ ಇಂದಿನಿಂದ | ಸಾವಿರಾರು ಕಾರ್ಯಕರ್ತರು ಸೇರುವ ಸಾಧ್ಯತೆ

ಮಿನಿವಿಧಾನಸೌಧ ಮುಂದೆ ಬ್ಯಾರಿಕೇಡ್ ನಿರ್ಮಾಣ
ದೇವದುರ್ಗ,ಏ.೧೩- ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಮಿನಿವಿಧಾನಸೌಧ ಮುಂಭಾಗದಲ್ಲಿ ಆಯೋಗ ಬಿಗಿಭದ್ರತೆ ಕೈಗೊಳ್ಳಲು ಮುಂದಾಗಿದೆ.
ರಸ್ತೆಯ ಡಿವೈಡರ್ ಮೇಲೆ ಸುಮಾರು ೧೦೦ಮೀಟರ್ ಉದ್ದ ಕಟ್ಟಿಗೆಯಿಂದ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ಒನ್‌ವೇ ಮಾಡಲಾಗಿದೆ. ಮಿನಿವಿಧಾನಸೌಧಕ್ಕೆ ಖಾಸಗಿ ವಾಹನಗಳು ಬಾರದಂತೆ ಕಟ್ಟಿಗೆಗಳಿಂದ ರಸ್ತೆ ಬಂದ್ ಮಾಡಲಾಗಿದ್ದು, ಸೌಧದ ಎರಡೂ ಗೇಟ್‌ಗೆ ವ್ಯಕ್ತಿಗಳು ಮಾತ್ರ ಓಡಾಡಲು ಅವಕಾಶ ನೀಡಿದ್ದು, ಬೈಕ್, ಕಾರ್ ಬಾರದಂತೆ ಗೇಟ್ ಬಂದ್ ಮಾಡಲಾಗಿದೆ.
ದೇವದುರ್ಗ ಸೂಕ್ಷ್ಮ ವಿಧಾನಸಭಾ ಕ್ಷೇತ್ರವಾಗಿದ್ದರಿಂದ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳ ಬೆಂಬಲಿಗರು ಒಳಗಡೆ ಬಾರದಂತೆ ತಡೆಯಲು ಕ್ರಮಕೈಗೊಳ್ಳಲಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ನಾಮಪತ್ರ ಸಲ್ಲಿಸುವ ವೇಳೆ ಸಾವಿರಾರು ಬೆಂಬಲಿಗರ ಜತೆ ಸೌಧಕ್ಕೆ ಬರುವ ಸಾಧ್ಯತೆಯಿದೆ. ಹೀಗಾಗಿ ಒಳಗಡೆ ಅಭ್ಯರ್ಥಿಗಳ ಜತೆ ಮೂವರಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಜನರು ಬರುವನ್ನು ತಡೆಯಲು ದೊಡ್ಡ ಮಟ್ಟದ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕುತೂಹಲ ಮೂಡಿದೆ.
ಶಕ್ತಿ ಪ್ರದರ್ಶನ?:
ಚುನಾವಣೆಯನ್ನು ಮೂರೂ ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು ನಾಮಪತ್ರ ಸಲ್ಲಿಕೆ ದಿನ ಬೃಹತ್ ಶಕ್ತಿ ಪ್ರದರ್ಶನ ಮಾಡಿ ಕ್ಷೇತ್ರದಲ್ಲಿ ಸಂದೇಶ ಕಳಿಸಲು ಅಭ್ಯರ್ಥಿಗಳು ಮುಂದಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಏ.೧೭ ಹಾಗೂ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಏ.೧೯ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎಂದು ಪಕ್ಷಗಳ ಮೂಲಗಳು ತಿಳಿಸಿವೆ. ಆ ದಿನ ಇಬ್ಬರೂ ನೂರಾರು ವಾಹನ ಮೂಲಕ ಸಾವಿರಾರು ಜನರೊಂದಿಗೆ ಮೆರವಣಿಗೆ ಮಾಡಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ಮೂರೂ ಪಕ್ಷದ ಅಭ್ಯರ್ಥಿಗಳು ಜಿದ್ದಿಗೆಬಿದ್ದು ಭಾರಿ ಜನರನ್ನು ಸೇರಿಸಲಿದ್ದಾರೆ ಎನ್ನಲಾಗಿದೆ.

೧೩-ಡಿವಿಡಿ-೩