ನಾಮಪತ್ರ ಸಲ್ಲಿಕೆ ಅಂತ್ಯ ನಾಳೆಯಿಂದ ಪರಿಶೀಲನೆ

ಬೆಂಗಳೂರು,ಏ.೨೦:ರಾಜಕೀಯ ಪಕ್ಷಗಳಿಗೆ ಜಿದ್ದಾಜಿದ್ದಿನ ಅಖಾಡವೆನಿಸಿರುವ ಈ ಬಾರಿಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಅಂತ್ಯಗೊಂಡಿದೆ. ಇಂದು ಕಡೆಗಳಿಗೆಯಲ್ಲಿ ಟಿಕೆಟ್ ದೊರೆತವರು ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಬೃಹತ್ ರೋಡ್ ಶೋ ನಡೆಸಿ ಉಮೇದುವಾರಿಗೆ ಸಲ್ಲಿಸಿದರು. ಇಂದು ಗ್ರಹಣ ಮತ್ತು ಅಮಾವಾಸ್ಯೆಯಾಗಿರುವುದರಿಂದ ನಿನ್ನೆಯೇ ಘಟಾನುಘಟಿ ನಾಯಕರು ಉಮೇದುವಾರಿಕೆ ಸಲ್ಲಿಸಿದ್ದರು.
ನಾಳೆಯಿಂದ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಏ. ೨೪ ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ ೧೦ರಂದು ಮತದಾನ ನಡೆಯಲಿದ್ದು, ಮೇ ೧೩ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಎಲ್ಲ ೨೨೪ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಜಾತ್ಯಾತೀತ ಜನತಾದಳ ೨೦೨ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ೭ ಕ್ಷೇತ್ರಗಳಲ್ಲಿ ಜೆಡಿಎಸ್ ಬಾಹ್ಯಬೆಂಬಲ ಘೋಷಿಸಿದೆ.ನಿನ್ನೆ ತಡರಾತ್ರಿ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಗ್ಗಂಟಾಗಿ ಉಳಿದಿದ್ದ ೫ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಶಿಡ್ಲಘಟ್ಟ, ಬಿವಿ. ರಾಜೀವ್ ಗೌಡ (ಮೀಸಲು), ಎಸ್. ಆನಂದ್‌ಕುಮಾರ್ ಅರಕಲಗೂಡಿನಲ್ಲಿ ಎಸ್.ಪಿ. ಶ್ರೀಧರ್‌ಗೌಡ ಹಾಗೂ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್ ಅಲಿ ಅವರಿಗೆ ಮಣೆ ಹಾಕಲಾಗಿದೆ. ಈ ಮೂಲಕ ಕಾಂಗ್ರೆಸ್ ತನ್ನ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.
ಇವರೆಲ್ಲರೂ ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ನಡೆಸಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮೌಢ್ಯಕ್ಕೆ ಸಡ್ಡು ಹೊಡೆದು ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿದರು. ಯಮಕನ ಮರಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.ಮತ್ತೊಂದೆಡೆ ಬಿಜೆಪಿಯು ಬಾಕಿ ಉಳಿದಿದ್ದ ಎರಡೂ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡಿಲ್ಲ. ಜತೆಗೆ ಈಶ್ವರಪ್ಪ ಆಪ್ತ ಎಸ್.ಎಸ್ ಚನ್ನಬಸಪ್ಪರವರಿಗೆ ಟಿಕೆಟ್ ಘೋಷಿಸಿದೆ.ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಸಂಸದ ಬಿ.ವಿ. ನಾಯಕ್‌ರವರಿಗೆ ಮಾನ್ವಿಯಿಂದ ಟಿಕೆಟ್ ನೀಡಲಾಗಿದೆ. ಇವರಿಬ್ಬರು ಇಂದು ನಾಮಪತ್ರ ಸಲ್ಲಿಸಿದರು.ಟಿಕೆಟ್ ಕೈ ತಪ್ಪಿರುವ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂತೇಶ್, ತಮಗೆ ಟಿಕೆಟ್ ಸಿಗದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒತ್ತಾಯ ಮಾಡಿದ್ದಾರೆ. ಪಕ್ಷ ಸಂಘಟನೆ ಮಾಡುವಂತೆ ತಂದೆ ಹೇಳಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇನೆ. ಮುಂಬರುವ ದಿನಗಳಲ್ಲಿ ಬಿಜೆಪಿ ತನಗೆ ಜವಾಬ್ದಾರಿ ನೀಡುವ ವಿಶ್ವಾಸವಿದೆ ಎಂದು ಹೇಳಿದರು.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ಗೆ ಸೇರ್ಪಡೆಯಾದರು. ಇಂದು ಶಿವಮೊಗ್ಗ ನಗರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಮಹಾನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದರು.
ಹಾಸನದಲ್ಲಿ ಹೆಚ್‌ಡಿಡಿ ಶಕ್ತಿ ಪ್ರದರ್ಶನ
ತವರು ಜಿಲ್ಲೆ ಹಾಸನದಲ್ಲಿ ಜೆಡಿಎಸ್‌ನಿಂದ ಟಿಕೆಟ್ ಪಡೆದಿರುವ ಸ್ವರೂಪ್‌ರವರು ಇಂದು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನ ನಗರದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಸ್ವರೂಪ್‌ರವರು ಉಮೇದುವಾರಿಕೆ ಸಲ್ಲಿಸಿದರು.