ನಾಮಪತ್ರ ಸಲ್ಲಿಕೆಯಲ್ಲೇ ಕೈ-ಕಮಲ ಕಹಳೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.04:- ಸುಡುತ್ತಿರುವ ಬಿಸಿಲಿನ ಕಾವಿನ ಜತೆ ಜತೆಗೆ ಮೈಸೂರಲ್ಲಿ ಚುನವಣಾ ಕಾವು ಏರತೊಡಗಿದ್ದು, ಊಮೇದುವಾರಿಕೆ ಸಲ್ಲಿಕೆಯಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಲೋಕಸಭೆಯ ಕಹಳೆಯ ಮೊಳಗಿಸಿ ಶಕ್ತಿ ಪ್ರದರ್ಶನದ ಜತೆಗೆ ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆದವು.
ಕಳೆದ ನಾಲ್ಕು ದಿನಗಳಿಂದ ಮೈಸೂರಿನಲ್ಲಿ ಬಿಸಿಲಿನ ಒಂದೆಡೆ ಏರಿಕೆಯಾಗಿದೆ. ಆದರೆ, ಅದರ ನಡುವೆಯೂ ರಾಜಕೀಯದ ಕಾವು ಮತ್ತಷ್ಟು ಏರ ತೊಡಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಒಂದಿಲ್ಲೊಂದು ರಣತಂತ್ರ ರೂಪಿಸಲಾರಂಭಿಸಿದ್ದವು. ಅದರ ಪ್ರಮುಖ ಭಾಗವಾಗಿ ಇಂದು ಎರಡು ಪಕ್ಷದ ಅಭ್ಯರ್ಥಿಗಳು ಅಬ್ಬರದ ಪ್ರಚಾರದೊಂದಿಗೆ ಘಟಾನುಘಟಿ ನಾಯಕರ ಜತೆಗೂಡಿ ನಾಮ ಪತ್ರ ಸಲ್ಲಿಸಿದರು.
ಮೈತ್ರಿ ಅಭ್ಯರ್ಥಿ ಶಕ್ತಿ ಪ್ರದರ್ಶನ: ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯಾತೀತ ಜನತಾದಳ ಅಭ್ಯರ್ಥಿಯಾಗಿ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ತಾಯಿ ಪ್ರಮೋದದೇವಿ ಒಡೆಯರ್ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಅದಕ್ಕೂ ಮುನ್ನ ಕುವೆಂಪು, ಬಸವೇಶ್ವರ, ನಾಲ್ವಡಿ, ಅಂಬೇಡ್ಕರ್, ವಾಲ್ಮೀಕಿ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಮೂಹಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೈ ಬಿಸಿ ಹುರಿದುಂಬಿಸಿದರು. ಈ ವೇಳೆ ಕಾರ್ಯಕರ್ತರು ಪಟಾಕಿ ಸಿಟಿ ಜಯಘೋಷ ಮೊಳಗಿಸಿದರು. ತೆರೆದ ವಾಹನದಲ್ಲಿ ಜಯಚಾಮರಾಜ ಒಡೆಯರ್ ವೃತ್ತದವರೆಗೂ ರಾಜ್ಯ ನಾಯಕರೊಂದಿಗೆ ಆಗಮಿಸಿದ ಯಧುವೀರ್ ಸಮಯದ ಕೊರತೆ ಹಿನ್ನೆಲೆಯಲ್ಲಿ ಕಾರಿನ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾಜಿ ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ಜಿ.ಡಿ.ಹರೀಶ್‍ಗೌಡ, ಮಾಜಿ ಶಾಸಕ ಎಸ್.ಎ.ರಾಮದಾಸ್, ಕೆ.ಮಹದೇವ್, ಅಶ್ವಿನ್‍ಕುಮಾರ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಸೇರಿ ಅನೇಕರು ಉಪಸ್ಥಿತರಿದ್ದರು.
ಅಖಾಡಕ್ಕಿಳಿದ ಸಿದ್ದು, ಡಿಕೆಶಿ: ಇನ್ನೂ ಚಾಮರಾಜನಗರದಲ್ಲಿ ಸುನೀಲ್‍ಬೋಸ್ ಪರವಾಗಿ ನಾಮಪತ್ರ ಸಲ್ಲಿಸಿ ನೇರವಾಗಿ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ?ಮಣ್ ನಾಮಪತ್ರ ಸಲ್ಲಿಸಿದರು.
ನಗರದ ಟೆರಿಷಿಯನ್ ಕಾಲೇಜು ಸಮೀಪದಲ್ಲಿ ನಾಮಪತ್ರ ಸಲ್ಲಿಸಿ ಅನಂತರ ತೆರೆದ ವಾಹನದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ನಾವು ಹೆಚ್ಚಿನ ಯಾವುದೇ ಮೆರವಣಿಗೆ ಇಂದು ಬೇಡವೆಂದು ನಿರ್ಧರಿಸಿದೆವು. ಎ.13 ಹಾಗೂ 14ರಂದು ಇಡೀ ಕ್ಷೇತ್ರವನ್ನು ಸಿಎಂ ಅವರೊಟ್ಟಿಗೆ ಸುತ್ತಾಡುವುದಾಗಿ ತೀರ್ಮಾನಿಸಿದ್ದೇವೆ. ಅಂದೆ ಬೃಹತ್ ಸಭೆ ಆಯೋಜನೆಗೆ ಚಿಂತನೆ ನಡೆಸಿದ್ದೇವೆ. ಇಲ್ಲಿ ಅಭ್ಯರ್ಥಿ ಲಕ್ಷ?ಮಣ್ ಅಲ್ಲ. ಬದಲಿಗೆ ಸಿಎಂ, ಡಿಸಿಎಂ, ಸಚಿವರು ಹಾಗೂ ಮತದಾರರಾದ ನೀವೇ ಎಂದು ಭಾವಿಸಿ ಕಾಂಗ್ರೆಸ್‍ಗೆ ಮತ ಹಾಕುವಂತೆ ಕೋರಿದರು.
ನಿಮೆಲ್ಲರ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ:
ಸಾಮಾನ್ಯ ಕಾರ್ಯಕರ್ತರಿಗೂ ಬೆಲೆಯನ್ನು ನೀಡುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ನನ್ನನ್ನು ಗೆಲ್ಲಿಸಿ ನಿಮೆಲ್ಲರ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ತಿಳಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು, ಪ್ರಿಯಾಂಕ ಗಾಂಧಿ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಮೈಸೂರು ಕೊಡಗು ಕ್ಷೇತ್ರದ ಎಲ್ಲಾ ಶಾಸಕರುಗಳ ಬೆಂಬಲದಿಂದ ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ಬಾರಿ ಸೋಲನ್ನು ಅನುಭವಿಸಿದ್ದೆ. ಆದರೂ ಸಹ ನನ್ನ ನಿಷ್ಠಾವಂತ ಕಾರ್ಯವನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಈ ಬಾರಿ ನನಗೆ ಹೆಚ್ಚಿನ ಬೆಂಬಲವನ್ನು ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.
ನಿಮ್ಮ ನಂಬಿಕೆಯನ್ನು ನಾನು ಎಂದಿಗೂ ಉಸಿ ಮಾಡುವುದಿಲ್ಲ. ದಿನದ 24 ಗಂಟೆ ನಿಮ್ಮ ಸೇವೆ ಮಾಡಲು ಸದಾ ನಿಮ್ಮೊಂದಿಗೆ ಇರುತ್ತೇನೆ. 15 ದಿನಗಳ ಕಾಲ ಮೈಸೂರಿನಲ್ಲಿ ಹಾಗೂ 15 ದಿನಗಳ ಕಾಲ ಕೊಡಗಿನಲ್ಲಿ ಇದ್ದುಕೊಂಡು ತಮ್ಮೆಲ್ಲರ ಸೇವೆಯನ್ನು ನಿಷ್ಠೆಯಿಂದ ಮಾಡಲು ಸಿದ್ಧನಿದ್ದೇನೆ ಎಂದರು.
2013 ರಿಂದ 2018 ರವರೆಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮೈಸೂರಿಗೆ 3.800 ಕೋಟಿ ರೂ.ಅನುದಾನವನ್ನು ನೀಡಿದೆ. ಮಹಾರಾಣಿ ಕಾಲೇಜು, ವಿದ್ಯಾರ್ಥಿ ನಿಲಯ, ಜಯದೇವ ಆಸ್ಪತ್ರೆ, ಕಾಂಕ್ರೀಟ್ ರಸ್ತೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದರು.
ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳವನ್ನಾಗಿ ನಿರ್ಮಿಸಲು ಉತ್ತಮವಾದ ಅವಕಾಶವಿದೆ. ಆದರೆ ಕೇಂದ್ರದಿಂದ ಹಿಂದೆ ಇದ್ದ ಸಂಸದರು ಯಾವುದೇ ಪ್ರಯತ್ನ ಮಾಡಲಿಲ್ಲ. ಈ ಕೆಲವನ್ನು ನಾನು ಮಾಡುತ್ತೇನೆ ಎಂದರು.
ಜನರ ಮಧ್ಯೆ, ಧರ್ಮದ ಮಧ್ಯೆ ಜಾತಿಯ ಮಧ್ಯ ಯಾವುದೇ ತಾರತಮ್ಯ ಮಾಡುವುದಿಲ್ಲ ಎಲ್ಲರನ್ನೂ ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಕಾರ್ಯಕರ್ತರು ಮತ್ತು ಮುಖಂಡರು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಿ ಮತ ಹಾಕಿಸುವುದರ ಮೂಲಕ ನನ್ನನ್ನು ಜಯಶೀಲರನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್‍ಸೇಠ್, ಮಂಥರ್‍ಗೌಡ, ಹರೀಶ್‍ಗೌಡ, ಡಿ.ರವಿಶಂಕರ್, ಎಂಎಲ್‍ಸಿ ಡಾ.ಡಿ.ತಿಮ್ಮಯ್ಯ, ಮಾಜಿ ಎಂಎಲ್‍ಸಿ ಮರಿತಿಬ್ಬೇಗೌಡ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕರಾದ ಮಂಜುನಾಥ್, ಎಂ.ಕೆ.ಸೋಮಶೇಖರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು ಸೇರಿ ಅನೇಕರು ಉಪಸ್ಥಿತರಿದ್ದರು.