ನಾಮಪತ್ರ ಭರಾಟೆ

ಬೆಂಗಳೂರು, ಏ. ೧೫- ಮೇ ೭ ರಂದು ನಡೆಯಲಿರುವ ೨ನೇ ಹಂತದ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಭರಾಟೆ ಬಿರುಸಾಗಿದ್ದು, ಘಟಾನುಘಟಿ ನಾಯಕರುಗಳು ಇಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಮೇ ೭ ರಂದು ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ೨ನೇ ಹಂತದ ಚುನಾವಣೆ ನಡೆಯಲಿದ್ದು, ಈ ಚುನಾವಣೆಯ ಹುರಿಯಾಳುಗಳಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜಬೊಮ್ಮಾಯಿ, ಜಗದೀಶ್‌ಶೆಟ್ಟರ್, ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳು ಇಂದು ನಾಮಪತ್ರ ಸಲ್ಲಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಮ್ಮ ಬೆಂಬಲಿಗರ ಜತೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ನಾಯಕರುಗಳು ಉಪಸ್ಥಿತರಿದ್ದರು.
ಈ ಕ್ಷೇತ್ರದಲ್ಲಿ ದಿಂಗಾಲೇಶ್ವರಸ್ವಾಮೀಜಿಯ ಸ್ಪರ್ಧೆ ಕಾರಣ ಬಿಜೆಪಿಗೆ ಗೆಲುವು ಪ್ರತಿಷ್ಟೆಯಾಗಿದ್ದು, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾದರು.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಸವರಾಜಬೊಮ್ಮಾಯಿ ಅವರು ಇಂದು ಬೆಂಬಲಿಗರ ಜತೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿಯಾಗಿರುವ ಹಾವೇರಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಬೊಮ್ಮಾಯಿ ಅವರು ಹುಬ್ಬಳ್ಳಿಯ ತಮ್ಮ ತಂದೆ-ತಾಯಿ ಪ್ರತಿಮೆಗೆ ನಮನ ಸಲ್ಲಿಸಿ, ನಂತರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಹಾಗೂ ಬಿ.ಸಿ. ಪಾಟೀಲ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರತಿಷ್ಠಿತ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಸಹ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ನಿತೇಶ್‌ಪಾಟೀಲ್ ರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಸಂಸದೆ ಮಂಗಳಾ ಅಂಗಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಹನುಮಂತ ನಿರಾಣಿ, ಮಾಜಿ ಶಾಸಕ ಅನಿಲ್ ಬೆನಕೆ ಸೇರಿದಂತೆ ಹಲವು ನಾಯಕರು ಜಗದೀಶ್ ಶೆಟ್ಟರ್ ಅವರಿಗೆ ಸಾತ್ ನೀಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಸಹ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಬೃಹತ್ ಮೆರವಣಿಗೆ ನಡೆಸಿ, ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.
ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್‌ಕುಮಾರ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಇಂದು ನಾಮಪತ್ರ ಸಲ್ಲಿಸಿದರು.
ತಮ್ಮ ಸಹೋದರ ಹಾಗೂ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ತಮ್ಮ ಪತಿ ನಟ ಶಿವರಾಜ್‌ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಸೇರಿದಂತೆ ಹಲವರ ಜತೆ ಆಗಮಿಸಿ ಅಪಾರ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.
ಕಳೆದ ಶುಕ್ರವಾರ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇಂದು ಮತ್ತೊಮ್ಮೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದರು.
ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಈಶ್ವರಪ್ಪ ಅವರುಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗುರುತದ್ ಹೆಗಡೆ ಅವರಿಗೆ ತಮ್ಮ ಉಮೇದುವಾರಿಕೆಯ ಅರ್ಜಿಯನ್ನು ನೀಡಿದರು.
ಮೇ ೭ ರಂದು ನಡೆಯಲಿರವ ೨ನೇ ಹಂತದ ಚುನಾವಣೆಗೆ ಏ. ೧೨ ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಇಂದು ಶುಭದಿನದ ಕಾರಣ ಹಲವು ನಾಯಕರುಗಳ ನಾಮಪತ್ರ ಸಲ್ಲಿಕೆಯ ಭರಾಟೆ ಬಿರುಸಾಗಿತ್ತು.
ಈ ಚುನಾವಣೆಗೆ ಈ ತಿಂಗಳ ೧೯ ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಏ. ೨೦ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. ೨೨ ನಾಮಪತ್ರ ವಾಪಸ್ಸಾತಿಗೆ ಕಡೆಯ ದಿನವಾಗಿದೆ. ಮೇ ೭ ರಂದು ಮತದಾನ ನಡೆಯಲಿದ್ದು, ಜೂನ್. ೪ ರಂದು ಫಲಿತಾಂಶ ಹೊರ ಬೀಳಲಿದೆ.
ಮೇ ೭ ರಂದು ಶಿವಮೊಗ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.