ನಾಮಪತ್ರ ಭರಾಟೆ ಬಿರುಸು:ಮೋಹನ್, ಸೌಮ್ಯ ಉಮೇದುವಾರಿಕೆ ಸಲ್ಲಿಕೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ರವರು ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗೆ ಇಂದು ಸಲ್ಲಿಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವರಾದ ಜಿ. ಜನಾರ್ದನರೆಡ್ಡಿ, ಅರವಿಂದ ಲಿಂಬಾವಳಿ ಅವರು ಇದ್ದರು.

ಬೆಂಗಳೂರು, ಏ.೧- ರಾಜ್ಯ ರಾಜಧಾನಿ ಬೆಂಗಳೂರು ಎರಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಸೌಮ್ಯಾರೆಡ್ಡಿ, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಗರದಲ್ಲಿಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿ ಸೌಮ್ಯಾ ರೆಡ್ಡಿ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಜಯನಗರದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಸೇರಿದಂತೆ ಅಪಾರ ಬೆಂಬಲಿಗರು ಪಾಲ್ಗೊಂಡಿದ್ದರು.
ಅದೇ ರೀತಿ, ಬೆಂಗಳೂರು ಕೇಂದ್ರ ಲೋಕ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಬನ್ನಪ್ಪ ಪಾರ್ಕ್ ಉದ್ಯಾನವನದಲ್ಲಿ ಬೃಹತ್ ಸಮಾವೇಶ ನಂತರ ಜಾಥ ಮೂಲಕ, ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಗಾಲಿಜನಾರ್ದನ ರೆಡ್ಡಿ ಸೇರಿದಂತೆ ಪ್ರಮುಖರು ಇದ್ದರು.
ಎಷ್ಟು ಸಲ್ಲಿಕೆ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಮೊದಲ ಹಂತದಲ್ಲಿ ಏ.೨೬ರಂದು ನಡೆಯಲಿರುವ ೧೪ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ ಈವರೆಗೆ ೫೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮತ್ತೊಂದೆಡೆ, ಹೈ-ಹೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟ ರಮಣೆಗೌಡ (ಸ್ಟಾರ್ ಚಂದ್ರು) ಅವರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮಂಡ್ಯದ ಕಾಳಿಕಾಂಬದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಾರಿ ಮೆರಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯ ಸ್ವಾಮಿ, ಎಐಸಿಸಿ ಕಾರ್ಯದರ್ಶಿ ರೋಜಿ ಎಮ್‌ಜಾನ್ ಶಾಸಕರಾದ ಗಣಿಗ ರವಿ, ರಮೇಶ ಬಂಡಿ ಸಿದ್ದೇಗೌಡ, ದಿನೇಶ್ ಗೂಳಿಗೌಡ, ಮರಿ ತಿಬ್ಬೇಗೌಡ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು.
ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಸಿದ್ದು, ಉಸ್ತುವಾರಿ ಸಚಿವ ರಾಜಣ್ಣ, ಎಐಸಿಸಿ ಕಾರ್ಯದರ್ಶಿ ರೋಜಿ ಎಮ್‌ಜಾನ್ ಶಾಸಕರಾದ ಶಿವಲಿಂಗೇಗೌಡ, ಎಂ . ಆನಂದ್ , ಮಾಜಿ ಸಚಿವರು, ಶಾಸಕರು ಮುಖಂಡರು ಪಾಲ್ಗೊಂಡಿದ್ದರು. ಈಗಾಗಲೇ ಬೆಂ.ಗ್ರಾ. ಲೋಕಸಭಾ ಕ್ಷೇತ್ರದಿಂದ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅಬ್ಬರ ಅರ್ಭಟವಿಲ್ಲದೆ ಸರಳವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನುಳಿದಂತೆ ನಾಳೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಸಲಿದ್ದಾರೆ.
ಅದೇ ರೀತಿ, ಏ.೩ರಂದು ಬೆಂ. ಕೇಂದ್ರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಮತ್ತು ಬೆಂ.ಉತ್ತರ ಕ್ಷೇತ್ರದ ಅಭ್ಯರ್ಥಿ ಪ್ರೊ. ರಾಜುಗೌಡ ನಾಮಪತ್ರ ಸಲ್ಲಿಸಲಿದ್ದಾರೆ.
ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್ ಕೃಷ್ಣದತ್ತ ಒಡೆಯರ್, ಚಾಮರಾಜ ನಗರದ ಬಿಜೆಪಿ ಅಭ್ಯರ್ಥಿ ಬಾರಾಜ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೋಟಾ ಶ್ರೀನಿವಾಸ ಪೂಜಾರಿ, ತುಮಕೂರಿನ ವಿ ಸೋಮಣ್ಣ, ಏ.೩ ರಂದು ನಾಮಪತ್ರ ಸಲ್ಲಿಸಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಡಿ.ವಿ. ಸದಾನಂದ ಗೌಡ, ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕ ಆರ್ ಅಶೋಕ್ ಪಾಲ್ಗೊಳ್ಳಲಿದ್ದಾರೆ.
ಏ.೪ ರಂದು ತುಮಕೂರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಪಿ. ಮುದ್ದು ಹನುಮೇಗೌಡ, ಮಂಡ್ಯ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮುಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.