ನಾಮನಿರ್ದೇಶಿತ ಸದಸ್ಯರನ್ನು ಕಡೆಗಣಿಸುತ್ತಿರುವ ಅಧಿಕಾರಿಗಳು -ಸಿತಾನಾಯಕ


ರಾಯಚೂರು, ನ.24- ಆಹಾರ ಮತ್ತು ನಾಗರಿಕ ಸರಬರಾಜು ಜಾಗೃತ ದಳದ ಜಿಲ್ಲಾ ಮಟ್ಟದ ನಾಮನಿರ್ದೇಶಿತ ಸದಸ್ಯತ್ವ ಸ್ಥಾನಕ್ಕೆ ಸರ್ಕಾರದಿಂದ ನೇಮಕವಾದರೂ ಕೂಡ  ನಮಗೆ ಯಾವುದೇ ರೀತಿಯ ಸಭೆಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ನಾಮನಿರ್ದಶಿತ ಸದಸ್ಯ ಸಿತಾನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,

ಸರಕಾರ ಆದೇಶದಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಕಡ್ಡಾಯವಾಗಿ 3 ತಿಂಗಳಿಗೊಮ್ಮೆ ಸಭೆಯನ್ನು ಕರೆಯಲು ಆದೇಶ ನೀಡಿದೆ ಆದರೆ, ಸರ್ಕಾರದ ನಿಯಮಗಳನ್ನು ಅಧಿಕಾರಿಗಳು ಸಂಪೂರ್ಣ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾಮನಿರ್ದೇಶಿತ ಸದಸ್ಯರನ್ನು ಅಧಿಕಾರಿಗಳು ಸಂಪೂರ್ಣ ಕಡೆಗಣಿಸಿ ಕನಿಷ್ಟ ಪಕ್ಷ ಸೌಜನ್ಯಕ್ಕಾದರೂ ಇಲಾಖೆಯ ಕಾರ್ಯಕ್ರಮಗಳಿಗೆ,ಧ್ವಜಾರೋಹಣ ಮತ್ತು ಇತರೆ ಜಯಂತಿಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 19 ತಿಂಗಳುಗಳಿಂದ ನಮಗೆ ಯಾವುದೇ ಸಭೆ ಅಥವಾ ಇಲಾಖೆಯ ಯಾವುದೇ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡದೇ ಇರುವ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ 

ಉಪ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ, ಆಹಾರ ಇಲಾಖೆಯ ಆಯುಕ್ತರಿಗೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಡವರಿಗೆ ಉಚಿತ ಪಡಿತರ ತಲುಪುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೋಟ್ಯಾಂತರ ಅನುದಾನವನ್ನು ಮೀಸಲಿಟ್ಟು ಬಡವರಿಗೆ ಹಾಗೂ ಸೂಕ್ತ ಸಾರ್ವಜನಿಕರಿಗೆ ದೊರೆಯಬೇಕಾದ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಪ್ಪಿಸಲು ಹಾಗೂ ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ಉತ್ತಮ ಅಭಿಪ್ರಾಯ ಮೂಡುವಂತೆ ಶ್ರಮಿಸಲು ನಾವುಗಳು ಈ ಇಲಾಖೆಯ ಜೊತೆಗೂಡಿ ಸೇವೆ ಮಾಡಲು ನಿರ್ಧರಿಸಿದ್ದೆವು, ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿಂದಿನ ಉಪ ನಿರ್ದೇಶಕ ಅರುಣಕುಮಾರ ಸಂಘಾವಿ ಹಾಗೂ ಆಹಾರ ಶಿರಸ್ತೇದಾರರಾದ  ಬಿ.ಆರ್.ವೆಂಕಣ್ಣ ಹಾಗೂ ಆಹಾರ ನಿರೀಕ್ಷಕ ಮೊಹಮ್ಮದ ಕಲೀಲ್ ಅವರು,ರಾಜಾರೋಷವಾಗಿ ಹಗರಣಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. 

ಈ ಸಂದರ್ಭದಲ್ಲಿ ನಾಮನಿರ್ದಶಿತರಾದ ಎಂ.ಮಾರೆಪ್ಪ,ಗಂಗಣ್ಣ,ಅನುರಾಧ ಇದ್ದರು.