
ಸಂಜೆವಾಣಿ ವಾರ್ತೆಹೊಸಪೇಟೆ, ಆ.22: ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರವಿದ್ದು, ಪಕ್ಷದ ಗೆಲುವಿಗೆ ಛಲವಾದಿ ಸಮುದಾಯದವರ ಕೊಡುಗೆ ಸಹ ದೊಡ್ಡದಿದೆ. ಹೀಗಾಗಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಭೂನ್ಯಾಯ ಮಂಡಳಿ, ಆರಾಧನಾ ಸಮಿತಿಗಳಂತಹ ನಾಮನಿರ್ದೇಶನಕ್ಕೆ ಅವಕಾಶ ಇರುವ ಕಡೆಗಳಲ್ಲಿ ಛಲವಾದಿ ಸಮುದಾಯದವರಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.ಛಲವಾದಿ ಮಹಾಸಭಾದ ಹೊಸಪೇಟೆ ತಾಲ್ಲೂಕು ಸಮಿತಿಯ ಅಧ್ಯಕ್ಷ ರಮೇಶ್ ಛಲವಾದಿ, ಮುಖಂಡರಾದ ಕೆ.ಶಂಕರ್ ನಂದಿಹಾಳ್, ಹನುಮೇಶ ಕಟ್ಟಿಮನಿ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಒತ್ತಾಯ ಮಾಡಿದರು.ಹೊಸಪೇಟೆ ತಾಲ್ಲೂಕಿನಲ್ಲಿ 12 ಸಾವಿರದಷ್ಟು ಛಲವಾದಿ ಸಮುದಾಯದವರಿದ್ದು, ಶೇ 80ರಷ್ಟು ಮಂದಿ ಕಾಂಗ್ರೆಸ್‌ಗೇ ಮತ ಚಲಾಯಿಸಿದ್ದಾರೆ. ಆದರೆ ಗೆದ್ದ ಬಳಿಕ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಎಲ್ಲೆಲ್ಲಿ ನಾಮನಿರ್ದೇಶನಕ್ಕೆ ಅವಕಾಶ ಇದೆಯೋ ಅಲ್ಲಿ ಛಲವಾದಿ ಸಮಯದಾಯದವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇದಕ್ಕೆ ತಪ್ಪಿದಲ್ಲಿ ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ‘ ಎಂದು ಶಂಕರ್ ನಂದಿಯಾಳ್ ಎಚ್ಚರಿಸಿದರು.ಮಹಾಸಭಾದ ಲಕ್ಷ್ಮೀಕಾಂತ ಸುಗ್ಗನಹಳ್ಳಿ, ಸಿ.ಶ್ರೀನಿವಾಸ್, ಯಮುನಪ್ಪ ಸಹ ಪತ್ರಿಕಾಗೋಷ್ಠಿಯಲ್ಲಿದ್ದರು.