ನಾಪೋಕ್ಲು ಪೊಲೀಸರ ಕಾರ್ಯಾಚರಣೆ-ಕೊಲೆ ಆರೋಪಿ ಸುಳ್ಯದಲ್ಲಿ ಸೆರೆ

ಸುಳ್ಯ, ಎ.೬- ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿವೋರ್ವನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರ ಸಹಕಾರದೊಂದಿಗೆ ಬಂಧಿಸುವಲ್ಲಿ ಮಡಿಕೇರಿಯ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆ ಆರೋಪಿ ಆರ್.ಡಿ.ಬಾಲಕೃಷ್ಣಕೂಲಿ ಕಾರ್ಮಿಕ ರವಿ ಎಂಬವರನ್ನು ಹತ್ಯೆ ಮಾಡಿದ್ದ ಆರೋಪದಡಿ ಆರ್.ಡಿ.ಬಾಲಕೃಷ್ಣ ಎಂಬಾತನನ್ನು ಪೊಲೀಸರು ಸುಳ್ಯದಲ್ಲಿ ಬಂಧಿಸಿದ್ದಾರೆ. ರವಿ ಮತ್ತು ಬಾಲಕೃಷ್ಣ ಕೂಲಿ ಕೆಲಸಕ್ಕಾಗಿ ನಾಪೊಕ್ಲುವಿನ ಇಂದಿರಾ ನಗರದಲ್ಲಿ ವಾಸವಾಗಿದ್ದರು. ಮಾ. ೩೧ ರಂದು ಇವರು ಹೋಟೆಲ್‌ನಲ್ಲಿ ಊಟ ಮುಗಿಸಿ ಮಲಗಲು ಕೊಠಡಿಗೆ ಬಂದಾಗ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಬಾಲಕೃಷ್ಣನು ರವಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.ಈತನ ಬಂಧನಕ್ಕಾಗಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಆದೇಶದಂತೆ ಮಡಿಕೇರಿ ಡಿವೈಎಸ್‌ಪಿ ದಿನೇಶ್ ಅವರ ಮಾರ್ಗದರ್ಶನದಲ್ಲಿ ನಾಪೋಕ್ಲು ಠಾಣಾಧಿಕಾರಿ ಆರ್.ಕಿರಣ್, ಸಿಬ್ಬಂದಿಗ ನವೀನ್, ಸಜನ್, ಮಧು, ಮತ್ತು ರವಿ ಮತ್ತಿತರರು ಕಾರ್ಯಾಚರಣೆ ನಡೆಸಿದ್ದರು.ಸದ್ಯ ಆರೋಪಿಯನ್ನು ಸುಳ್ಯ ಪೊಲೀಸರ ನೆರವಿನೊಂದಿಗೆ ಜಾಲ್ಸೂರಿನಲ್ಲಿ ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.