ನಾಪತ್ತೆಯಾದ ಇಬ್ಬರು ಪಿಯು ವಿದ್ಯಾರ್ಥಿನಿಯರಿಗೆ ತೀವ್ರಶೋಧ

ಬೆಂಗಳೂರು,ಜು.೨೮-ನಗರದ ಪ್ರತಿಷ್ಟಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು ಆತಂಕಗೊಂಡಿರುವ ಪೋಷಕರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದ್ವಿತೀಯ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಸ್ನೇಹಿತರಾಗಿದ್ದು, ಇದ್ದಕ್ಕಿದ್ದಂತೆ ನಾವಿನ್ನು ಮನೆಗೆ ಬರಲ್ಲ ನಮ್ಮನ್ನು ಹುಡುಕಬೇಡಿ ಎಂದು ತಿಳಿಸಿ ನಾಪತ್ತೆಯಾಗಿದ್ದಾರೆ.ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹರ್ಷಿತಾ ಜು.೨೫ರಂದು ಸಂಜೆ ೫ ಗಂಟೆಗೆ ಸ್ನೇಹಿತೆ ಮರಿಯಾ ವೈಶಾಲಿಯನ್ನು ಭೇಟಿಯಾಗಲು ತೆರಳಿದ್ದು ಮನೆಗೆ ಬರುವುದು ವಿಳಂಬವಾಗಿತ್ತು.
ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಪೋಷಕರು ಮರಿಯಾ ವೈಶಾಲಿಗೆ ಕರೆ ಮಾಡಿ ವಿಚಾರಿಸಿದಾಗ ವಸಂತನಗರದಲ್ಲಿದ್ದೇವೆ, ಸ್ವಲ್ಪ ಸಮಯದಲ್ಲಿ ಮನೆಗೆ ಬರುತ್ತಿದ್ದೇವೆ ಎಂದಿದ್ದರು.ಆದರೆ ಸ್ವಲ್ಪ ಸಮಯದಲ್ಲೇ ಮರಿಯಾಳ ಫೋನ್ ಸ್ವಿಚ್ ಆಫ್ ಆದಾಗ ಹರ್ಷಿತಾಳ ಪೋಷಕರು ಮರಿಯಾ ವೈಶಾಲಿಯ ಪೋಷಕರಿಗೆ ಕರೆ ಮಾಡಿ ವಿಚಾರಿಸಿದ್ದರು.ಈ ಸಂದರ್ಭದಲ್ಲಿ ಮರಿಯಾ “ನಾವಿನ್ನು ಮನೆಗೆ ಬರಲ್ಲ ನಮ್ಮನ್ನು ಹುಡುಕಬೇಡಿ” ಎಂದು ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಇಬ್ಬರ ಪೋಷಕರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಗ್ರೌಂಡ್ಸ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಇಬ್ಬರು ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.