ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮಂಗಳೂರು, ಎ.1೨- ಮೂರು ದಿನಗಳ ಹಿಂದೆ ಪಣಂಬೂರು ಸಮೀಪದ ತಣ್ಣೀರುಬಾವಿಯಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಮೀನುಗಾರರೊಬ್ಬರ ಮೃತದೇಹ ನಿನ್ನೆ ಮುಂಜಾನೆ ಮಂಜೇಶ್ವರದ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.

ತಣ್ಣೀರುಬಾವಿಯ ದಾವೂದ್ ಸಿದ್ದೀಕ್(39) ಮೃತಪಟ್ಟವರು. ಇವರು ಗುರುವಾರ ತಣ್ಣೀರುಬಾವಿಯಿಂದ ಇತರ ಐವರ ಜೊತೆ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದರು. ಅಂದು ಪೂರ್ವಾಹ್ನ ಸುಮಾರು 11:30ರ ವೇಳೆಗೆ ಪಣಂಬೂರು ಕಡಲ ತೀರದಿಂದ ಅರಬ್ಬೀ ಸಮುದ್ರದಲ್ಲಿ ಸುಮಾರು 14 ನಾಟಿಕಲ್ ಮೈಲ್ ದೂರದಲ್ಲಿ ಇವರು ನಾಪತ್ತೆಯಾಗಿದ್ದರೆನ್ನಲಾಗಿತ್ತು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾವೂದ್ ಸಿದ್ದೀಕ್ ಅವರ ಮೃತದೇಹವು ನಿನ್ನೆ ಬೆಳಗ್ಗೆ ತಲಪಾಡಿ-ಮಂಜೇಶ್ವರ ಮಧ್ಯೆ ಕಡಲ ತೀರದಿಂದ 14 ನಾಟಿಕಲ್ ಮೈಲ್ ದೂರದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯ ದೋಣಿಯವರು ಹಿಡಿದು ದಡಕ್ಕೆ ತಂದಿದ್ದಾರೆ. ದಾವೂದ್ ಸಿದ್ದೀಕ್ ಕಳೆದ 15 ವರ್ಷಗಳಿಂದ ಇವರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ತಣ್ಣೀರುಬಾವಿಯ ಮುಳುಗು ರಕ್ಷಣಾ ತಂಡದ ಸದಸ್ಯರೂ ಆಗಿದ್ದರು.