ನಾಪತ್ತೆಯಾಗಿದ್ದ ಬಾಲಕರುಬೆಂಗಳೂರಿನಲ್ಲಿ ಪತ್ತೆ


ಪುತ್ತೂರು, ನ.೧೨- ಇಲ್ಲಿನ ವಸತಿ ಶಾಲೆಯೊಂದರಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.  
ನ. ೭ರಂದು ಸಾಯಂಕಾಲ ಸನಿಹದ ಬಾಲಕರ ವಸತಿ ಶಾಲೆಯಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದರು. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ನಡುವೆ ಬಾಲಕರು ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಪೊಲೀಸರ ತಂಡ ಮೈಸೂರು, ಬೆಂಗಳೂರು, ಸಕಲೇಶಪುರಗಳಲ್ಲಿ ತೆರಳಿ ಶೋಧ ಕಾರ್ಯವನ್ನು ನಡೆಸಿದೆ. ಈ ನಡುವೆ ರೈಲ್ವೇ ಅಧಿಕಾರಿಗಳಿಗೆ ಮಕ್ಕಳು ನಾಪತ್ತೆಯಾಗಿರುವ ವಿಚಾರವನ್ನು ವಿವರವಾಗಿ ತಿಳಿಸಲಾಗಿತ್ತು. ಈ ಮಾಹಿತಿ ಆಧಾರದಲ್ಲಿ ಬಾಲಕರನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಬಾಲಕರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿಂದ ಬೆಂಗಳೂರು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ಮಕ್ಕಳನ್ನು ವಿಚಾರಿಸಿ ಪೋಷಕರಿಗೆ ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ತಿಳಿದುಬಂದಿದೆ.