ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ ಪಬ್‌ಜೀ ಆಟಕ್ಕೆ ಸಂಬಂಧಿಸಿದ ಹತ್ಯೆ?

ಉಳ್ಳಾಲ, ಎ.೪- ನಾಪತ್ತೆಯಾಗಿದ್ದ ೧೨ರ ಹರೆಯದ ಬಾಲಕನ ಮೃತದೇಹ ಪತ್ತೆಯಾದ ಘಟನೆ ಆದಿತ್ಯವಾರ ಮುಂಜಾನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿ.ರೋಡ್ ನಲ್ಲಿರುವ ನಿರ್ಜನ ಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಗಳ ತಂಡವೊಂದು ಬಾಲಕನನ್ನು ಕೊಲೆ ಮಾಡಿದ್ದಾರೆ ಎಂಬ ಶಂಕೆ ಸದ್ಯ ವ್ಯಕ್ತವಾಗಿದ್ದು, ಒಟ್ಟಿನಲ್ಲಿ ತನಿಖೆ ಮುಂದುವರೆದಿದೆ.
ಕೆ.ಸಿ.ರೋಡ್ ಕೋಮರಂಗಳ ನಿವಾಸಿ ಹನೀಫ್ ಎಂಬವರ ಪುತ್ರ ಆಕಿಫ್ (೧೨) ಮೃತ ಬಾಲಕ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ೯ ಗಂಟೆಗೆ ಆಕಿಫ್ ಮದ್ರಸದಿಂದ ಮನೆಗೆ ಬಂದಿದ್ದು, ಬಳಿಕ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಬಾಲಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ಇಲ್ಲಿನ ನಿರ್ಜನ ಪ್ರದೇಶದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ. ಬಾಲಕನ ದೇಹವು ಮನೆಯಿಂದ ಸುಮಾರು ೩ ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದು ತಲೆಗೆ ಕಲ್ಲಿನಿಂದ ಒಡೆದು ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಬ್‌ಜೀ ಆಟಕ್ಕೆ ಸಂಬಂಧಿಸಿದಂತೆ ಬಾಲಕನ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೂಡ ಕೆಲವು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಆದರೆ ಪ್ರಕರಣದ ನೈಜಾಂಶ ತನಿಖೆ ಮೂಲಕ ಹೊರಬರಬೇಕಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸ್ ಕಮಿಷನರ್ ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್ , ಡಿಸಿಪಿ ಹರಿರಾಂ, ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಮತ್ತು ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.