ನಾಪತ್ತೆಯಾಗಿದ್ದ ದ.ಆಫ್ರಿಕಾದ ೯ ಮಂದಿ ಪತ್ತೆ

ಬೆಂಗಳೂರು,ಡಿ.೪- ದೇಶದಲ್ಲಿ ಮೊದಲ ಒಮಿಕ್ರಾನ್ ರೂಪಾಂತರಿ ತಳಿ ಪತ್ತೆಯಾಗಿದ್ದ ಬೆನ್ನಲ್ಲೆ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿ ನಾಪತ್ತೆಯಾಗಿದ್ದ ೯ ಮಂದಿ ಪ್ರಯಾಣಿಕರನ್ನು ಪತ್ತೆ ಹಚ್ಚುವಲ್ಲಿ ಬಿಬಿಎಂಪಿ ಸಫಲವಾಗಿದೆ.
ಇವರೆಲ್ಲರೂ ನಾಪತ್ತೆಯಾಗಿದ್ದರಿಂದ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಪ್ರಯಾಣಿಕರ ಪಾಸ್‌ಪೋರ್ಟ್ ಆಧರಿಸಿ ಅವರ ಪತ್ತೆಗಾಗಿ ಬಿಬಿಎಂಪಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದರು. ಆದರೆ, ಇವರೆಲ್ಲರ ಮೊಬೈಲ್‌ಫೋನ್ ಸ್ವಿಚ್ ಆಫ್ ಆಗಿತ್ತು. ಈಗ ಇವರೆಲ್ಲರ ಸಂಪರ್ಕ ಸಾಧಿಸಿದ್ದಾರೆ.
ಒಂದು ವಾರದ ಅವಧಿಯಲ್ಲಿ ದಕ್ಷಿಣ ಆಫ್ರಿಕಾದಿಂದ ೫೭ ಮಂದಿ ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದರು. ಈ ಪೈಕಿ ೧೦ ಮಂದಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈಗ ೯ ಜನರ ಸಂಪರ್ಕ ಲಭ್ಯವಾಗಿದ್ದು, ಪಾಲಿಕೆ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


ಈಗ ಇವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಮುಂದುವರೆದಿದೆ. ಈ ೯ ಮಂದಿ ಪ್ರಯಾಣಿಕರಲ್ಲೂ ಒಮಿಕ್ರಾನ್ ಪತ್ತೆಯಾಗುವ ಭೀತಿ ಎದುರಾಗಿದೆ.
ಬೂಸ್ಟರ್ ಡೋಸ್ ಕೇಂದ್ರಕ್ಕೆ ಪತ್ರ
ಒಮಿಕ್ರಾನ್ ಸೋಂಕು ಉಲ್ಬಣ ಹಿನ್ನೆಲೆ ಎಲ್ಲಾ ಆರೋಗ್ಯ ಸಿಬ್ಬಂದಿಗೆ ‘ಬೂಸ್ಟರ್ ಡೋಸ್’ ನೀಡುವ ಅಗತ್ಯವಿದ್ದು, ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸೋಂಕುಗಳು ಉಲ್ಬಣ ಆಗುತ್ತಿರುವ ಹಿನ್ನೆಲೆ ಆರೋಗ್ಯ ಸಿಬ್ಬಂದಿಗೆ ಶಕ್ತಿಯ ಅವಶ್ಯಕತೆ ಇದೆ. ಹೀಗಾಗಿ, ಬೂಸ್ಟರ್ ಡೋಸ್ ನೀಡಬೇಕೆಂದು ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.
ಇದರ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದು, ಬೂಸ್ಟರ್ ಡೋಸ್‌ಗೆ ಅನುಮತಿ ಕೇಳಿದ್ದಾರೆ. ಬಿಬಿಎಂಪಿಯೂ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿಸಿದರು.
ಪತ್ತೆ ಚುರುಕು: ಒಮಿಕ್ರಾನ್ ಸೋಂಕು ಸಂಬಂಧಿಸಿದ ಜಗತ್ತಿನಾದ್ಯಂತ ಕಳೆದ ಹತ್ತು ದಿನಗಳಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇನ್ನೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಹಿಂದಿನಿಂದ ಯಾರಾದರೂ ವಿದೇಶದಿಂದ ತಾಯ್ನಾಡಿಗೆ ವಾಪಸ್ಸಾದರೂ ಅವರ ಪತ್ತೆ ಕಾರ್ಯಾವೂ ನಡೆಯುತ್ತಿದೆ ಎಂದರು.
ಮತ್ತೊಂದೆಡೆ, ಸರ್ಕಾರ ಆದೇಶ ಮಾಡಿದ ದಿನದಿಂದಲೇ ಪಾಲನೆ ಮಾಡುವ ಕೆಲಸ ಆಗುತ್ತಿದೆ ಎಂದ ಅವರು, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡರೆ ಮಾತ್ರ ನಾವು ಯಾವುದೇ ಸೋಂಕಿನಿಂದ ಪಾರಾಗಲು ಸಾಧ್ಯ ಎಂದು ಗುಪ್ತ ತಿಳಿಸಿದರು.

ಲಸಿಕೆ ಪತ್ತೆ ಕಾರ್ಯ ನಮ್ಮದಲ್ಲ..!
ಎರಡು ಡೋಸ್ ಪಡೆದವರು ಮಾತ್ರ ಸಿನಿಮಾ ಥಿಯೇಟರ್, ಮಾಲ್, ಸಾರ್ವಜನಿಕ ಪ್ರದೇಶ ಪ್ರವೇಶಿಸಲು ಸಾಧ್ಯ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಆದರೆ, ಲಸಿಕೆ ಪಡೆದವರನ್ನು ಗುರುತಿಸುವ, ಪರಿಶೀಲನೆ ನಡೆಸುವ ಕಾರ್ಯ ಆಯಾ ಕಟ್ಟಡ ಮಾಲೀಕರಿಗೆ ಬಿಟ್ಟಿದ್ದು, ಇದನ್ನು ಬಿಬಿಎಂಪಿ ಮಾಡುವುದಿಲ್ಲ ಎಂದು ಗೌರವ್ ಗುಪ್ತ ತಿಳಿಸಿದರು.