ನಾನೇ ಪೂರ್ಣವಾಧಿ ಸಿಎಂ ಎಂಬ ದೈರ್ಯ ಸಿಎಂಗಿಲ್ಲ: ಪ್ರತಾಪ ಸಿಂಹ ಟೀಕೆ

ಮೈಸೂರು: ಜೂ.20:- ಸಿದ್ದರಾಮಯ್ಯನವರಿಗೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ನೇರವಾಗಿ ಹೇಳುವ ದೈರ್ಯವಿಲ್ಲ. ಪುಕ್ಕಲುತನವೇ ಅದಕ್ಕೆ ಕಾರಣ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.
ಸೋಮವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಎಂ.ಬಿ.ಪಾಟೀಲ ಹೇಳಿದ್ದಾರೆ. ಅಧಿಕಾರ ಬಿಟ್ಟು ಕೊಡುವ ಇರಾದೆ ಸಿದ್ದರಾಮಯ್ಯ ಅವರಿಗಿಲ್ಲ. ಇದನ್ನು ತನ್ನ ಚೇಲಾಪಡೆಯ ಮೂಲಕ ಹೇಳಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾತ್ರ ದೊಡ್ಡದಿದೆ. ಆದರೆ, ಕಾಂಗ್ರೆಸ್ ದೊಡ್ಡ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು 2ನೇ ಬಾರಿಗೆ ಅವಕಾಶ ಕೊಟ್ಟಿದೆ. ಆದರೆ, ಅಂತಹ ದೊಡ್ಡ ಮನಸ್ಸು ಸಿದ್ದರಾಮಯ್ಯಗಿಲ್ಲ ಎಂದು ದೂರಿದರು.
ಪ್ರತಾಪ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಸಚಿವ ಎಂ.ಬಿ. ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರಿಗೆ ಈಗ ದೊರೆತಿರುವ ಖಾತೆಯಲ್ಲಿ ಕೇವಲ ಚಿಲ್ಲರೆ ಸಿಗುತ್ತದೆ. ಕುಳಿತ ಕಡೆಯೇ ಕಂತೆ ಕಂತೆ ದುಡ್ಡು ಬರುವ ಖಾತೆ ಸಿಗಲಿಲ್ಲವೆಂದು ವಿಲವಿಲ ಒದ್ದಾಡುತ್ತಿದ್ದಾರೆ. ಅವರಿಗೆ ಚಿಲ್ಲರೆ, ನೋಟುಗಳ ಬಗ್ಗೆ ಮಾತ್ರವೇ ಚಿಂತೆ. ಸಿದ್ದರಾಮಯ್ಯ ಓಲೈಕೆಯೇ ತಮ್ಮ ಜವಾಬ್ದಾರಿ ಎಂದುಕೊಂಡಿದ್ದಾರೆ. ಅವರ ಬಂದೂಕಿಗೆ ಹೆಗಲು ಕೊಡುವುದೇ ನಿಮ್ಮ ಕೆಲಸವೇ ಪಾಟೀಲರೇ? ಎಂದು ಕೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ಪದೇ ಪದೇ ಅವರ ಬಗ್ಗೆ ಏಕೆ ಮಾತನಾಡುತ್ತೀರಿ? ಬ್ರಾಹ್ಮಣರ ಮೇಲೆ ಏಕಿಷ್ಟು ದ್ವೇಷ? ಬಸವೇಶ್ವರರು ಮೂಲತಃ ಬ್ರಾಹ್ಮಣರಲ್ಲವೇ? ಸಂತೋಷ್ ನಿಮಗೆ ತಿವಿದಿದ್ದಾರಾ, ನೀವು ನಿಜವಾಗಲೂ ಲಿಂಗಾಯತರಾ ಎಂದು ಪ್ರಶ್ನಿಸಿದರು. `ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್‍ನ ಕುತಂತ್ರ ಅಲ್ಲವೇ? ಕಾಂಗ್ರೆಸ್ ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದ್ದರೂ ಸುಮ್ಮನಿದ್ದವರು ನೀವು. ದಿನೇಶ್ ಗುಂಡೂರಾವ್ ಯಡಿಯೂರಪ್ಪ ಅವರನ್ನು ಹುಚ್ಚ ಎಂದಿದ್ದರು. ಆಗ ನಿಮ್ಮೊಳಗೆ ಲಿಂಗಾಯತ ಭಾವನೆ ಜಾಗೃತ ಆಗಲಿಲ್ಲವಲ್ಲ? ಯಡಿಯೂರಪ್ಪ ವಿರುದ್ಧದ ಷಡ್ಯಂತ್ರಕ್ಕೆ ಹಾಗೂ ಸಿದ್ದರಾಮಯ್ಯ ಲಿಂಗಾಯತ ವೀರಶೈವರನ್ನು ಒಡೆಯಲು ಹೋದಾಗ ಸುಪಾರಿ ಪಡೆದವರು ನೀವೇ ತಾನೆ. ಈಗ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎನ್ನುವ ಮೂಲಕ ಒಕ್ಕಲಿಗರನ್ನು ಮುಗಿಸಲು ಹೊರಟಿದ್ದೀರಾ? ಎಂದರು.
ಎಂ.ಬಿ.ಪಾಟೀಲ ಸಿದ್ದರಾಮಯ್ಯ ಚೇಲಾ ಪಡೆಯ ಅಧ್ಯಕ್ಷರಾಗಿದ್ದಾರೆ. ವಿಧಾನಸಭೆ ವಿರೋಧಪಕ್ಷದ ನಾಯಕನ ಆಯ್ಕೆ ಶೀಘ್ರದಲ್ಲೇ ಆಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಬಸವಗೌಡ ಪಾಟೀಲ ಯತ್ನಾಳ ಹೆಸರು ಕೇಳಿ ಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನ್ನೂ ಅವರು ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಅವರ ಹೆಸರಿಗೊಂದು ಹವಾ ಇದೆ ಎಂದು ಪರೋಕ್ಷವಾಗಿ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದರು. ರಾಜ್ಯದಲ್ಲಿ ಯದ್ವಾತದ್ವಾ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್ ನೀಡಿದೆ. ಇದರ ವಿರುದ್ಧ ಜೂ.22 ರಂದು ಕೈಗಾರಿಕೆಗಳ ಸಂಘದಿಂದ ಕರ್ನಾಟಕ ಬಂದ್‍ಗೂ ಕರೆ ನೀಡಲಾಗಿದೆ. ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕು. ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಮಾಡಲ್ಲ ಎಂದು ಹೇಳುತ್ತಿದ್ದಾರೆ. ಅಂದರೆ ಕಾರ್ಖಾನೆಗಳು ಮುಚ್ಚಿಹೋಗಲಿ ಎಂಬ ಇರಾದೆ ಸರ್ಕಾರಕ್ಕೆ ಇರಬಹುದು. ನಿಮ್ಮ ಬಿಟ್ಟಿ ಭಾಗ್ಯಗಳಿಗೆ ದುಡ್ಡು ಎಲ್ಲಿಂದ ಬರಬೇಕು. ಇದಕ್ಕೋಸ್ಕರ ಕಾರ್ಖಾನೆಗೆ ಬರೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸರ್ಕಾರದ ನಿಲುವನ್ನು ನಾವು ಖಂಡಿಸುತ್ತೇವೆಂದರು.
ಗಂಡನ ದರೋಡೆ ಮಾಡಿ ಹೆಂಡತಿಗೆ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ. ಗಂಡನ ಜೇಬಿಗೆ ಕತ್ತರಿಹಾಕಿ ಹೆಂಡತಿಗೆ ಮಾಸಿಕ ಎರಡು ಸಾವಿರ ಕೊಡಲು ಹೊರಟಿದ್ದಾರೆ. ಅದು ಜನರಿಗೆ ಈಗ ಗೊತ್ತಾಗ್ತಾ ಇದೆ. ಮದ್ಯದ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಿಟ್ಟಿ ಭಾಗ್ಯಗಳ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಇದು ದೋಖಾ ಸರ್ಕಾರ ಎಂಬುದು ಜನರಿಗೆ ಗೊತ್ತಾಗುತ್ತಿದೆ. ಮೋದಿ ಸರ್ಕಾರ 5 ಕೆಜಿ ಉಚಿತ ಅಕ್ಕಿ ಕೊಡುತ್ತಿದೆ ಎಂಬ ಸತ್ಯವನ್ನು ಈಗ ಹೇಳಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ 10ಕೆಜಿ ಅಕ್ಕಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದೀರಿ
ಕೇಂದ್ರ ಸರ್ಕಾರದ 5 ಕೆಜಿ ಜೊತೆಗೆ ನಿಮ್ಮ 10 ಕೆಜಿ ಸೇರಿಸಿ ಕೊಡಬೇಕು ತಾನೆ?. ಕೇಂದ್ರ ಸರ್ಕಾರದ ಕೇವಲ 1 ಕೆಜಿಗೆ 3ರೂ.ನಂತೆ 5 ಕೆಜಿ ಅಕ್ಕಿ ಕೊಡುತ್ತಿದ್ದರು. ಅದಕ್ಕೆ ತಮ್ಮ ಲೇಬಲ್ ಹಾಕೊಂಡು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಿರಿ. ಮೋದಿಯ ಅಕ್ಕಿ ಸಿದ್ದರಾಮಯ್ಯನ ಜಾತ್ರೆ ಅಂತ ನೀವು ಮಾಡುತ್ತಾ ಇದ್ದಿರಿ. ನೀವು ಹಣಕಾಸು ಮಂತ್ರಿಯಾಗಿ, ಎರಡು ಬಾರಿ ಉಪ ಮುಖ್ಯಮಂತ್ರಿಗಳಾಗಿ ಮುಖ್ಯಮಂತ್ರಿಗಳಾಗಿ ಇದೆಲ್ಲ ಗೊತ್ತಿಲ್ಲವೇ? ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಆರೋಪ ಮಾಡುವ ಬದಲಿಗೆ ಕೆಜಿಗೆ 34ರೂ.ನಂತೆ 10 ಕೆಜಿಗೆ 340 ರೂನ ನೇರವಾಗಿ ಅವರ ಅಕೌಂಟಿಗೆ ಹಾಕಿ. ಇಲ್ಲ ಅಂದರೆ, ಓಪನ್ ಮಾರುಕಟ್ಟೆಯಲ್ಲೇ ಅಕ್ಕಿ ಖರೀದಿ ಮಾಡಿ ಕೊಡಿ ಎಂದರು.