ನಾನೇ ಜೆಡಿಎಸ್ ಅಭ್ಯರ್ಥಿ ಮಂಜು ಸ್ವಯಂ ಘೋಷಣೆ

ಹಾಸನ,ಮಾ.೭:ಮುಂಬರುವ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿವೆ. ಇದರ ಬೆನ್ನಲ್ಲೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಾವೇ ಎಂದು ಮಾಜಿ ಸಚಿವ ಎ. ಮಂಜು ಇಂದು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ.
ಅರಕಲಗೂಡು ತಾಲ್ಲೂಕಿನ ಹನ್ಯಾಳುಗ್ರಾಮದಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರ ಜತೆ ಸಭೆ ನಡೆಸಿ ಎಲ್ಲರೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾನು ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿ ನೆರೆದಿದ್ದವರಿಂದ ಹಾಣೆ-ಪ್ರಮಾಣ ಮಾಡಿಸಿದರು.
ಜೆಡಿಎಸ್ ಸೇರಿ ಮಂಜು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು, ಇನ್ನು ಮುಂದೆ ನಾವೆಲ್ಲರೂ ಜೆಡಿಎಸ್ ಎಂದು ಬೆಂಬಲಿಗರು ಹಾಣೆ-ಪ್ರಮಾಣ ಮಾಡಿದರು.
ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಎ. ಮಂಜು ಅವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು.
ಈಗಾಗಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಮಂಜು, ಮಾ. ೧೧ ಅಥವಾ ೧೨ ರಂದು ಬೆಂಗಳೂರಿನಲ್ಲಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆ.
ಮಾ. ೧೬ ರಂದು ಅರಕಲಗೂಡಿನಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.