ಬೆಂಗಳೂರು,ಜೂ.೨೫:ನಾನು ಸನ್ಯಾಸಿ ಅಲ್ಲ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದು ಬಿಜೆಪಿ ಮುಖಂಡ ವಿ. ಸೋಮಣ್ಣ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಫೋರ್, ಸಿಕ್ಸ್ ಬಾರಿಸಲು ಹೋಗಿ ಬೌಲ್ಡ್ ಆಗಿದ್ದೇನೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಸೋಮಣ್ಣ ಅವರು ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಕಚೇರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ.
ಯಾವುದೇ ಸಂದರ್ಭದಲ್ಲೂ ವಿಚಲಿತನಾಗಿಲ್ಲ. ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಒಂದು ವೇಳೆ ನೀಡದಿದ್ದರೂ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷ ನೀಡಿರುವ ಗುರಿಯನ್ನು ತಲೆಯ ಮೇಲೆ ಹೊತ್ತು ಮಾಡಿದ್ದೇನೆ. ಇದುವರೆಗೂ ೧೨ ಚುನಾವಣೆಗಳನ್ನು ನೋಡಿದ್ದೇನೆ. ೮ ಉಪಚುನಾವಣೆಗಳಲ್ಲೂ ಕೆಲಸ ಮಾಡುವ ಅವಕಾಶ ಪಕ್ಷ ಕೊಟ್ಟಿದೆ. ಚುನಾವಣೆಯಲ್ಲಿ ಸೋತ ನಂತರ ಒಂದೂವರೆ ತಿಂಗಳಿನಿಂದ ನಿರುದ್ಯೋಗಿಯಾಗಿದ್ದೇನೆ ಎಂದರು.
ತಮ್ಮ ಕ್ಷೇತ್ರ ಗೋವಿಂದರಾಜದಲ್ಲಿ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿ ಮಾಡಿದ್ದೇನೆ. ಓರ್ವ ರಾಜಕಾರಣಿಯಾಗಿ ಪಕ್ಷದ ಸಂದೇಶವನ್ನು ನನ್ನ ಕ್ಷೇತ್ರದಲ್ಲಿ ತಲುಪಿಸುವ ಕೆಲಸ ಮಾಡಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಪಕ್ಷ ಕೊಟ್ಟ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು.
ಚಿಂಚೋಳಿ ಉಪಚುನಾವಣೆ ಸಂದರ್ಭದಲ್ಲಿ ಸುಡುವ ಬಿಸಿಲಿನಲ್ಲಿ ಕೆಲಸ ಮಾಡಿದ್ದೇನೆ.
ತಮ್ಮ ಜತೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಮಾತ್ರ ಪಕ್ಷ ಕಳುಹಿಸಿತ್ತು. ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸಿದ್ದೇನೆ ಎಂದರು.
ಇವೆಲ್ಲದರ ನಡುವೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮುನ್ನಲೆಗೆ ಬರುತ್ತಿದ್ದಂತೆ ಸೋಮಣ್ಣ ಅವರು ಪಕ್ಷದ ಗಮನ ಸೆಳೆಯಲು ಮುಂದಾಗಿದ್ದು, ಸಭೆಗಳಲ್ಲಿ ಭಾಗವಹಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.