ನಾನು ಸಚಿವಾಕಾಂಕ್ಷಿ, ರಾಜಭವನದಿಂದ ಕರೆ ಬರಬಹುದೆಂದು ಕಾಯುತ್ತಿರುವೆ:ತೆಲ್ಕೂರ್

ಕಲಬುರಗಿ.ಜ.11:ಈ ಬಾರಿ ಸಚಿವ ಸಂಪುಟದಲ್ಲಿ ನನಗೆ ಅವಕಾಶ ಸಿಗಬಹುದು ಎನ್ನುವ ವಿಶ್ವಾಸವಿದೆ. ನನಗೂ ರಾಜಭವನದಿಂದ ಕರೆ ಬರಬಹುದು ಎಂದು ಕಾಯ್ದು ಕುಳಿತಿದ್ದೇನೆ ಎಂದು ಸೇಡಂ ಶಾಸಕರೂ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲಬುರ್ಗಿ- ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಹೇಳಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡ ಜನಸೇವಕ್ ಸಮಾವೇಶದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿ ಆಗುತ್ತಿದ್ದಂತೆ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹಾಕಿದ್ದೇವೆ. ಈ ನಡುವೆ ನಾನೂ ಕೂಡ ಸಚಿವಾಕಾಂಕ್ಷಿ ಇದ್ದೇನೆ ಎಂದು ಪುನರುಚ್ಛರಿಸಿದರು.
ಸಚಿವ ಸ್ಥಾನ ಕಲಬುರ್ಗಿಗೆ ಬೇಕು ಎನ್ನುವ ಕೂಗಿದೆ. ಕಲಬುರ್ಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಇಲ್ಲಿಯವರೆಗಿನ ಸರ್ಕಾರಗಳಲ್ಲಿ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಲಾಗಿತ್ತು. ಹಾಗಾಗಿ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ. ಈ ಬಾರಿ ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸುತ್ತಾರೆಂಬ ವಿಶ್ವಾಸ ಇದೆ. ಇಲ್ಲದೇ ಹೋದಲ್ಲಿ ಮತ್ತೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಗೆ ಸಚಿವ ಸ್ಥಾನ ಕೊಡಲು ಒತ್ತಡ ಮುಂದುವರೆಸುವುದಾಗಿ ತೆಲ್ಕೂರ್ ಅವರು ತಿಳಿಸಿದರು.