ನಾನು ಶಿಕ್ಷಣ ಸಚಿವನಲ್ಲ, ವಿದ್ಯಾರ್ಥಿಗಳ ಪೋಷಕ : ಸಚಿವ ಸುರೇಶ್

ಮಧುಗಿರಿ, ಜ. ೧೦- ನಾನು ಶಿಕ್ಷಣ ಸಚಿವನಲ್ಲ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಪೋಷಕ. ಅವರ ಯೋಗ ಕ್ಷೇಮ ಮತ್ತು ಶೈಕ್ಷಣಿಕ ಜೀವನ ಎರಡೂ ನನಗೆ ಮುಖ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.
ಮಧುಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಢಶಾಲಾ ವಿಭಾಗದಲ್ಲಿ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಶನ್, ಸಮರ್ಪಣಾ ಇನ್ಫೋಸಿಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೂರ ತರಂಗ ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ ಕೊರೊನಾ ಪಾಸ್ ಎಂದು ಕರೆಸಿಕೊಳ್ಳಲು ರಾಜ್ಯದ ಬಹುತೇಕ ವಿದ್ಯಾರ್ಥಿಗಳು ಇಷ್ಟಪಡದ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡಿಸಿದಾಗ ರಾಜ್ಯದ ೮.೫೦ ಲಕ್ಷ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಬರೆದು ಗೆದ್ದರು. ಪರೀಕ್ಷೆ ಸಂದರ್ಭದಲ್ಲಿ ಮಕ್ಕಳು ತೋರಿದ ಶಿಸ್ತು, ಸಂಯಮ ನಾಡಿನ ಹಿರಿಯರಿಗೆ ಮಾದರಿಯಾಗಿದೆ ಎಂದರು.
ಕೊರೊನಾ ಸಂಕಷ್ಟದಲ್ಲಿ ಆನ್‌ಲೈನ್ ಶಿಕ್ಷಣ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ. ಬಹುತೇಕ ಬಡ ಮಕ್ಕಳೇ ವ್ಯಾಸಂಗ ಮಾಡುವ ಸರ್ಕಾರಿ ಶಾಲೆಯ ಮಕ್ಕಳಿಗೆ ಪೋಷಕರು ಸ್ಮಾರ್ಟ್‌ಫೋನ್ ಕೊಡಿಸುವಷ್ಟು ಶಕ್ತರಿರುವುದಿಲ್ಲ. ಇದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಇನ್ಫೋಸಿಸ್ ದಿಗ್ಗಜ ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿಯವರ ಸಹಕಾರದಿಂದ ಶ್ರೀ ಜಪಾನಂದ ಸ್ವಾಮೀಜಿಯವರು ಗ್ರಾಮಾಂತರ ಪ್ರದೇಶದ ೨೧ ಶಾಲೆಗಳಲ್ಲಿ ಮೊದಲ ಹಂತದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗುಣಮಟ್ಟದ ಆನ್‌ಲೈನ್ ಶಿಕ್ಷಣವನ್ನು ನೀಡುತ್ತಿರುವುದು ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ವರದಾನವಾಗಿದೆ ಎಂದರು.
ಈ ಯೋಜನೆ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೀಮಿತವಾಗಿರದೇ ರಾಜ್ಯಾದ್ಯಂತ ವಿಸ್ತರಿಸುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿದ್ದ ಪಾವಗಡ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಮಾತನಾಡಿದರು.
ಹಿರಿಯ ಸಾಹಿತಿ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿ ಪ್ರೊ.ಡಾ. ದೊಡ್ಡರಂಗೇಗೌಡ ಮಾತನಾಡಿ, ನಾನು ಓದಿದ ಶಾಲೆಗೆ ೫ ದಶಕಗಳ ನಂತರ ಬಂದು ವೇದಿಕೆಯಲ್ಲಿ ನನ್ನ ಗೆಳೆಯನ ಬಗ್ಗೆ ಮಾತನಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನಾರಾಯಣ ಮೂರ್ತಿಯವರು ಹಿಮಾಲಯದ ಎತ್ತರಕ್ಕೆ ಬೆಳೆದಿದ್ದು, ಇವರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕವನ್ನಾಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಇನ್ಫೋಸೀಸ್ ಉಪಾಧ್ಯಕ್ಷ ಗುರುರಾಜ ದೇಶಪಾಂಡೆ, ತಹಶೀಲ್ದಾರ್. ಡಾ.ಜಿ ವಿಶ್ವನಾಥ್ ಮಾತನಾಡಿದರು. ಉಪವಿಭಾಗಾಧಿಕಾರಿ ಸೋಮಪ್ಪ. ಎಂ. ಕಡಕೋಳ್, ಸಮಗ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ, ಡಿಡಿಪಿಐಗಳಾದ ಎಂ. ರೇವಣಸಿದ್ದಪ್ಪ, ಸಿ. ನಂಜಯ್ಯ, ಡಿವೈಎಸ್ಪಿ ಎಂ.ಪ್ರವೀಣ್, ಡಯಟ್ ಪ್ರಾಂಶುಪಾಲರಾದ ಮಂಜುನಾಥ್, ವೈ.ಎನ್. ರಾಮಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಉತ್ತಮ ಶಿಕ್ಷಣದಿಂದ ಮಾತ್ರ ಗುಣಾತ್ಮಕ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಯಾವ ವ್ಯಕ್ತಿ ಉನ್ನತ ಶಿಕ್ಷಣ ಪಡೆಯುತ್ತಾನೋ ಅಂತಹ ವ್ತಕ್ತಿಯಲ್ಲಿ ಸಮಾಜಮುಖಿ ಚಿಂತನೆಗಳು ಮೊಳೆಯುತ್ತವೆ. ಜಪಾನಂದ ಸ್ವಾಮೀಜಿ ದೂರ ತರಂಗ ಶಿಕ್ಷಣದ ಮೂಲಕ ಕಾಂತ್ರಿ ಮಾಡಿರುವುದು ಸಂತಸ ತಂದಿದೆ. ನಾನು ಓದಿ ಬೆಳೆದ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ ೨೧ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುತ್ತಿರುವುದು ಗ್ರಾಮಾಂತರ ಭಾಗದ ಮಕ್ಕಳಿಗೆ ವರದಾನವಾಗಿದ್ದು, ಸ್ವಾಮೀಜಿಗಳು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಸಚಿವರು ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯದಾದ್ಯಂತ ಸುತ್ತುತ್ತಿದ್ದು, ಶಾಲೆಗಳ ಬಗ್ಗೆ ಅವರ ಕಾಳಜಿ ಅಭಿನಂದನೀಯ.

  • ಎನ್.ಆರ್. ನಾರಾಯಣ ಮೂರ್ತಿ, ಇನ್ಫೋಸಿಸ್ ದಿಗ್ಗಜ.