ನಾನು ಲೋಕಸಭೆ ಅಭ್ಯರ್ಥಿಯಲ್ಲ: ಸಾ.ರಾ.ಮಹೇಶ್

ಸಂಜೆವಾಣಿ ನ್ಯೂಸ್
ಮೈಸೂರು: ಫೆ.29:- ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಕಳೆದ 10 ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟಾರೆ ನಾನು ಲೋಕಸಭೆ ಚುನಾವಣೆಯ ಆಕಾಂಕ್ಷಿಯಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಪರೋಕ್ಷವಾಗಿ ಪ್ರತಾಪ್ ಸಿಂಹ ಪರ ಬಾಟಿ ಬೀಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಅಕ್ಕ ಸಮ್ಮೇಳನದ ಕುರಿತು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಉತ್ತರಿಸಿದ ಅವರು, ಪ್ರಸ್ತುತ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸ್ಥಿತಿ ಉತ್ತಮವಿಲ್ಲದ ಕಾರಣ ಸದ್ಯದಲ್ಲಿ ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲೂ ತಾವು ಸ್ಪರ್ಧಿಸುತ್ತಿಲ್ಲ. ಹೀಗಾಗಿ ಯಾವುದೇ ಚುನಾವಣೆಯ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಸ್ಪಷ್ಟಪಡಿಸಿದರು.
ಬಹುಶಃ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಪಕ್ಷದ ಹಿತದೃಷ್ಟಿಯಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ.
ಬಿಜೆಪಿ ನಾಯಕರೊಂದಿಗಿನ ಸಭೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯೊಂದಿಗೆ ಮೂರು ದಶಕಗಳಿಗೂ ಹೆಚ್ಚು ನಿಕಟ ಒಡನಾಟವನ್ನು ಹೊಂದಿದ್ದು, ಇದು ರಾಜಕೀಯ ಮಾಡುವ ವಿಷಯವಲ್ಲ ನಮಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಸರ್ವೋಚ್ಚ ನಾಯಕ. ರಾಜ್ಯ ಮತ್ತು ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಮತ್ತು ರಾಜ್ಯದಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದರು.
ಆ.30ರಿಂದ 12 ನೇ ಅಕ್ಕ ಸಮ್ಮೇಳನ
ಅಮೆರಿಕದಲ್ಲಿನ ಕನ್ನಡಿಗರು ಒಟ್ಟುಗೂಡಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ ಉಳಿಸಿಕೊಂಡು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸ್ಥಾಪಿಸಿಕೊಂಡಿರುವ ಅಕ್ಕ ಬಳಗದ ವತಿಯಿಂದ ಬರುವ ಆ. 30, 31 ಮತ್ತು ಸೆಪ್ಟೆಂಬರ್ ಒಂದರಂದು ವಾಷಿಂಗ್ಟನ್ ಡಿಸಿಗೆ ಸುಮಾರು 120 ಮೈಲಿ ದೂರದಲ್ಲಿರುವ ರಿಚ್ಮಂಡ್ ನಗರದಲ್ಲಿ ಈ ಬಾರಿಯ 12 ನೇ ವಿಶ್ವ ಅಕ್ಕ ಸಮ್ಮೇಳನ ನಡೆಯುತ್ತಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷರಾದ ರವಿ ಬೋರೇಗೌಡ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಬಳಗದಲ್ಲಿರುವವರೆಲ್ಲ ರಾಜ್ಯದ ಯಾವುದೋ ಒಂದು ಕಡೆ ಜನಿನಿ, ಎಲ್ಲೋ ಬೆಳೆದು ಅಮೆರಿಕದಲ್ಲಿ ವೈದ್ಯರು, ಎಂಜಿನಿಯರ್ ಮೊದಲಾದ ಸೇವೆ ಸಲ್ಲಿಸುತ್ತಿದ್ದೇವೆ. ಆದರೂ ಕನ್ನಡ ಭಾಷೆ, ಸಂಸ್ಕೃತಿ ಅಲ್ಲಿಯೂ ಉಳಿಸಿಕೊಂಡು ಮುಂದಿನ ಪೀಳಿಗೆಗೂ ಉಳಿಸಿಕೊಡುವ ಹಿನ್ನೆಲೆಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಈ ರೀತಿಯ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇದರಲ್ಲಿ ವಿಶ್ವದಾದ್ಯಂತದ ಸುಮಾರು ಐದು ಸಾವಿರ ಮಂದಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಈ ಸಮ್ಮೇಳನದಲ್ಲಿ ಸ್ಥಳೀಯ ಹಾಗೂ ವಿಶ್ವದ ಇತರೆಡೆಯ ಕಲಾವಿದರು, ವಿದ್ಯಾರ್ಥಿಗಳ ಸಂಘಟನೆಗಳ ಹಳೆಯ ವಿದ್ಯಾರ್ಥಿಗಳು, ವಾಣಿಜ್ಯ ಮಳಿಗೆ, ಸಾಹಿತ್ಯ, ಸಂಸ್ಕೃತಿ ಮೊದಲಾದ ಕಾರ್ಯಕ್ರಮ ಇರಲಿವೆ ಎಂದು ವಿವರಿಸಿದರು.
ಸಮ್ಮೇಳನ ಸಮಿತಿಯ ಡಾ. ವಿಶ್ವಾಮಿತ್ರ, ಮಹದೇಶ್, ಬಸವರಾಜು, ಡಾ. ನವೀನ್‍ಕೃಷ್ಣ, ವತ್ಸ ಹಾಜರಿದ್ದರು.