ನಾನು ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ: ಪ್ರತಾಪ್ ಸಿಂಹ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.25:- ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣದ ವಿಚಾರದಲ್ಲಿ ಬಿಜೆಪಿ ಸಂಸದ ಬುರುಡೆ ಬಿಡುತ್ತಾನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ರಸ್ತೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ರಸ್ತೆ. ನಾನು ಒಬ್ಬ ಮೇಸ್ತ್ರಿಯಷ್ಟೆ. ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ. ಮುಖ್ಯಮಂತ್ರಿಯಾದವರು ಪದ ಪ್ರಯೋಗದಲ್ಲಿ ಎಚ್ಚರ ವಹಿಸಬೇಕು. ಎಲ್ಲರನ್ನೂ ತಾತ್ಸರದಿಂದ ಮಾತಾಡುವುದನ್ನು ನಿಲ್ಲಿಸಲಿ. ರಾಜಕೀಯ ಮಾಡಬೇಕು ಎಂದುಕೊಂಡವರು ಹೇಳಿಕೊಳ್ಳಲು ಏನೂ ಇಲ್ಲದಿದ್ದಾಗ ಈ ರೀತಿ ಕ್ರೆಡಿಟ್ ಪಾಲಿಟಿಕ್ಸ್ ಶುರು ಮಾಡುತ್ತಾರೆ’ ಎಂದು ತಿರುಗೇಟು ನೀಡಿದರು.
ಇದು 8500 ಕೋಟಿ ಯೋಜನೆಯಾಗಿದೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ 8 ರೂಪಾಯಿ ಬಂದಿದ್ದರು ಸಿದ್ದರಾಮಯ್ಯ-ಎಚ್.ಸಿ ಮಹದೇವಪ್ಪ ಜೋಡಿ ರಸ್ತೆ ಎಂದೇ ಹೆಸರಿಡೋಣ ಎಂದು ವ್ಯಂಗ್ಯವಾಡಿದರು.
ಯಾರು ಬುರುಡೆ ಬಿಡುತ್ತಿದ್ದಾರೆ, ಯಾರು ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತಿದೆ. ರಸ್ತೆಯಲ್ಲಿ ನೀರು ತುಂಬಿದಾಗ, ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಜನರು ಬೈದಿದ್ದು, ನನ್ನನ್ನೇ. ಎಲ್ಲ ಸಮಸ್ಯೆ ಪರಿಹರಿಸಿದ್ದು ಪ್ರತಾಪ್ ಸಿಂಹನೇ. ಸಮಸ್ಯೆ ಎದುರಾಗಿದ್ದಾಗ ಸಿದ್ದರಾಮಯ್ಯ, ಎಚ್.ಸಿ ಮಹದೇವಪ್ಪ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಹೆಸರು ಬದಲಿಸಲು ಆಗಲ್ಲ: 
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2014ರಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿತ್ತು. ಈ ವೇಳೆ ಅಲ್ಪಸಂಖ್ಯಾತರಿಗೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಯೂನಿವರ್ಸಿಟಿ ನಿರ್ಮಾಣ ಮಾಡಲು ಮುಂದಾಗಿದ್ದರು. ದೇವರಾಜ ಮಾರುಕಟ್ಟೆ ವಿಚಾರ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಮಹಾರಾಜರೇನು ದುಡ್ಡು ಕೊಟ್ಟಿದ್ದರೆ ಎಂದಿದ್ದರು. ಹೀಗಾಗಿ ಸಿದ್ದರಾಮಯ್ಯಗೆ ಅಭಿಮಾನವಿರುವುದು ಟಿಪ್ಪು ಮೇಲೆ ಹೊರತು, ರಾಜ ಮನೆತನದ ಮೇಲಲ್ಲ ಎಂಬುದು ನಮಗೂ ಮನವರಿಕೆಯಾಗಿದೆ. ಆದರೆ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಪ್ರಸ್ತಾಪ ಮಾಡಲಾಗಿದೆ. ಕ್ಯಾಬಿನೇಟ್‍ನಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆ ಹೆಸರನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ ಎಂದರು. 
ಪ್ರಧಾನಿಗೆ ಹೋಲಿಸಿಕೊಳ್ಳಬೇಡಿ: 
ಸಿದ್ದರಾಮಯ್ಯ ಖಾಸಗಿ ವಿಮಾನದಲ್ಲಿ ಓಡಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು 2000 ಕೊಟ್ಟೆ, ಕರೆಂಟ್ ಕೊಟ್ಟೆ ಅಂತೀರಿ, ಇದನ್ನೆಲ್ಲಾ ನಿಮ್ಮ ದುಡಿಮೆ ಹಣದಲ್ಲಿ ಕೊಟ್ಟಿದ್ದೀರಾ? 
ನಾನ್ ಮಾಡಿದೆ ಮಾಡಿದೆ ಅಂತೀರಲ್ಲ, ನಿಮ್ ಮನೆಯಿಂದ ದುಡ್ಡು ತಂದುಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ವಿವೇಚನಾರಹಿತವಾಗಿ ಮಾತನಾಡುತ್ತಾರೆ, ಅವರ ಮಾತಿಗೆ ಅರ್ಥವೇ ಇಲ್ಲ. ಪ್ರಧಾನಿ ಭದ್ರತೆ ವಿಚಾರ ಪಾರ್ಲಿಮೆಂಟ್‍ನಲ್ಲಿ ತೀರ್ಮಾನಿಸಲಾಗಿದೆ. ಏರ್ ಫೆÇೀರ್ಸ್ ವಿಮಾನದಲ್ಲಿ ಅವರು ಓಡಾಡುತ್ತಾರೆ. ಪ್ರೈವೇಟ್ ಜೆಟ್‍ನಲ್ಲಿ ಚೇಲಾಗಳನ್ನು, ದುಡ್ಡು ಫೀಡ್ ಮಾಡುವವರನ್ನು ಕೂರಿಸಿಕೊಂಡು ಓಡಾಡಲ್ಲ. ದೇಶದಲ್ಲಿ 29 ಮುಖ್ಯಮಂತ್ರಿ , 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಎಂ ಇದ್ದಾರೆ. ಹೀಗಾಗಿ ನಿಮ್ಮನ್ನು ನೀವು ಪ್ರಧಾನಿ ಎತ್ತರಕ್ಕೆ ಹೋಲಿಸಿಕೊಳ್ಳಬೇಡಿ ಎಂದು ಟಾಂಗ್ ನೀಡಿದರು.