ನಾನು ಮೋದಿ ಅಭಿಮಾನಿ

ನ್ಯೂಯಾರ್ಕ್, ಜೂ.೨೧- ಭಾರೀ ನಿರೀಕ್ಷೆ ಹಾಗೂ ಭರವಸೆಗಳನ್ನು ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಪ್ರವಾಸ ಈಗಾಗಲೇ ಆರಂಭಗೊಂಡಿದೆ. ಸದ್ಯ ಅಮೆರಿಕಾ ತಲುಪಿರುವ ಮೋದಿ ಅವರನ್ನು ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್ ಭೇಟಿ ಮಾಡಿದ್ದು, ಭಾರತದಲ್ಲಿ ಹೂಡಿಕೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಈ ನಡುವೆ ನಾನು ಮೋದಿಯವರ ಅಭಿಮಾನಿಯಾಗಿದ್ದು, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು ಎಲಾನ್ ಮಸ್ಕ್ ಘೋಷಿಸಿರುವುದು ಸದ್ಯ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಟೆಸ್ಲಾ ಹಾಗೂ ಟ್ವಿಟರ್ ಸೇರಿದಂತೆ ಹಲವಾರು ಜಾಗತಿಕ ಕಂಪೆನಿಗಳ ಮುಖ್ಯಸ್ಥರಾಗಿರುವ ಮಸ್ಕ್ ಇದೀಗ ಪ್ರಧಾನಿಯವರನ್ನು ಭೇಟಿ ಮಾಡಿ, ಭಾರತದಲ್ಲಿ ಹೂಡಿಕೆಯ ಬಗ್ಗೆ ಚರ್ಚೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಮಸ್ಕ್, ನಾನೊಬ್ಬ ಮೋದಿಯವರ ಅಭಿಮಾನಿ. ಇದು ಪ್ರಧಾನಿಯವರೊಂದಿಗಿನ ಅದ್ಭುತ ಸಭೆಯಾಗಿದ್ದು, ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹೀಗಾಗಿ ಪರಸ್ಪರರ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ನಾನು ಭಾರತದ ಭವಿಷ್ಯದ ಬಗ್ಗೆ ನಂಬಲಾಗದಷ್ಟು ಉತ್ಸುಕನಾಗಿದ್ದೇನೆ. ಪ್ರಪಂಚದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚಿನ ಭರವಸೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಎಂದರು. ಮೋದಿ ನಿಜವಾಗಿಯೂ ಭಾರತದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಏಕೆಂದರೆ ಭಾರತದಲ್ಲಿ ಗಮನಾರ್ಹ ಹೂಡಿಕೆ ಮಾಡಲು ಅವರು ನಮ್ಮನ್ನು ಒತ್ತಾಯಿಸುತ್ತಿದ್ದಾರೆ, ಇದು ನಾವು ಮಾಡಲು ಒಲವು ತೋರುವ ಸಂಗತಿಯಾಗಿದೆ. ಹಾಗಾಗಿ ನಾವು ಸರಿಯಾದ ಸಮಯವನ್ನು ಕಂಡುಹಿಡಿಯಬೇಕು. ಅವರು ನಿಜವಾಗಿಯೂ ಭಾರತಕ್ಕಾಗಿ ಸರಿಯಾದ ಕೆಲಸವನ್ನು ಮಾಡಲು ಬಯಸುತ್ತಾರೆ. ಅಲ್ಲದೆ ಮುಕ್ತವಾಗಿರಲು ಬಯಸುತ್ತಾರೆ. ಕಂಪನಿಗಳಿಗೆ ಬೆಂಬಲವಾಗಿರಲು ಬಯಸುತ್ತಾರೆ. ಸ್ಟಾರ್‌ಲಿಂಕ್ ಅಂತರ್ಜಾಲವನ್ನು ಭಾರತಕ್ಕೂ ವಿಸ್ತರಿಸಲು ನಾವು ಇಚ್ಛೆ ಹೊಂದಿದ್ದೇವೆ ಎಂದು ಮಸ್ಕ್ ತಿಳಿಸಿದ್ದಾರೆ.ಉಳಿದಂತೆ ಪ್ರಧಾನಮಂತ್ರಿ ಮೋದಿ ಅವರು ಲೇಖಕ ರಾಬರ್ಟ್ ಥರ್ಮನ್ ಮತ್ತು ಸಂಖ್ಯಾಶಾಸ್ತ್ರಜ್ಞ ನಿಕೋಲಸ್ ನಾಸಿಮ್ ತಾಲೆಬ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಅಲ್ಲದೆ ಭಾರತೀಯ-ಅಮೆರಿಕನ್ ಗಾಯಕ ಫಾಲು ಶಾ, ಲೇಖಕ ಮತ್ತು ಸಂಶೋಧಕ ಜೆಫ್ ಸ್ಮಿತ್, ಮಾಜಿ ಯುಎಸ್ ವ್ಯಾಪಾರ ಪ್ರತಿನಿಧಿ ಮೈಕೆಲ್ ಫ್ರೊಮನ್, ರಾಜತಾಂತ್ರಿಕ ಡೇನಿಯಲ್ ರಸೆಲ್ ಮತ್ತು ರಕ್ಷಣಾ ತಜ್ಞ ಎಲ್ಬ್ರಿಡ್ಜ್ ಕಾಲ್ಬಿ ಸೇರಿದಂತೆ ಹಲವಾರು ಟೆಕ್ ಕಂಪೆನಿಗಳ ಸಿಇಒಗಳು ಕೂಡ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಒಟ್ಟಿನಲ್ಲಿ ಮೂರು ದಿನಗಳ ಭೇಟಿಯಲ್ಲಿ ಮೋದಿ ಹತ್ತು ಹಲವಾರು ದಿಗ್ಗಜರ ಜೊತೆ ಮಾತುಕತೆ ನಡೆಸಲಿದ್ದಾರೆ.

ಸದ್ಯದಲ್ಲೇ ಭಾರತಕ್ಕೆ ಟೆಸ್ಲಾ ಎಂಟ್ರಿ
ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ ಆರಂಭಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಸ್ಕ್, ಖಂಡಿತವಾಗಿಯೂ ಈ ಬಗ್ಗೆ ನಾವು ಗಮನ ಹರಿಸಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ ಟೆಸ್ಲಾ ಭಾರತದಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರ್‌ಗಳಲ್ಲಿ ಟೆಸ್ಲಾ ಅಗ್ರಸ್ಥಾನದಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಟೆಸ್ಲಾ ಕಾರ್‌ಗಳು ಸಹಜವಾಗಿಯೇ ಜಾಗತಿಕ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.