ಬೆಂಗಳೂರು,ಜು.೩೦:ನಾನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ, ರಾಜ್ಯಾಧ್ಯಕ್ಷ ಸ್ಥಾನ ಕೇಳಿ ಪಡೆಯುವಂತದ್ದಲ್ಲ, ಹೈಕಮಾಂಡ್ ಯಾರಿಗೆ ಜವಾಬ್ದಾರಿ ನೀಡುತ್ತದೋ ಗೊತ್ತಿಲ್ಲ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ, ಈಗ ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಷ್ಟೇ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಪಕ್ಷ ಜವಾಬ್ದಾರಿ ನೀಡಿದರೆ ನಿಭಾಯಿಸಲು ಸಿದ್ಧ ಎಂದರು.
ರಾಜ್ಯಾಧ್ಯಕ್ಷ ಸ್ಥಾನ ಒಂದು ಜವಾಬ್ದಾರಿ ಅದನ್ನು ಕೇಳಿ ಪಡೆಯುವಂತದ್ದಲ್ಲ, ವರಿಷ್ಠರು ಯಾರಿಗೆ ಜವಾಬ್ದಾರಿ ನೀಡುತ್ತಾರೋ ಗೊತ್ತಿಲ್ಲ. ನಾನಂತೂ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಅಲ್ಲ ಎಂದರು.
ಪಕ್ಷ ನೀಡುವ ಜವಾಬ್ದಾರಿಯನ್ನು ಹಿಂದೆಯೂ ನಿರ್ವಹಿಸಿದ್ದೇನೆ. ಮುಂದೆಯೂ ನಿರ್ವಹಿಸುತ್ತೇನೆ. ಬ್ಲಾಕ್ ಸಮಿತಿ ಅಧ್ಯಕ್ಷನಾಗಿ ನಾನು ಇಲ್ಲಿಯವರೆಗೂ ಬೆಳೆದು ಬಂದಿದ್ದೇನೆ ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈ ಬಿಟ್ಟಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಹುದ್ದೆ, ಅಧಿಕಾರ ಶಾಶ್ವತ ಅಲ್ಲ ನಾನು ಯಾವಾಗಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅದೇ ಸೇವಾ ಮನೋಭಾವದಿಂದ ಪಕ್ಷಕ್ಕೆ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ.ಟಿ ರವಿ ನೇಮಕವಾಗುತ್ತಾರೆ ಎಂಬ ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಹಿರಿಯರು ಅವರು ತೀರ್ಮಾನವಾಗಿದೆ ಎಂದು ಹೇಳಿಲ್ಲ. ಚರ್ಚೆಯಾಗುತ್ತಿದೆ ಎಂದಷ್ಟೇ ಹೇಳಿದ್ದಾರೆ. ನಾನು ೩೫ ವರ್ಷಗಳಿಂದಲೂ ಬಿಜೆಪಿಯಲ್ಲಿದ್ದೇನೆ. ಆಗಿನಿಂದಲೂ ಯಡಿಯೂರಪ್ಪರವರ ಆರ್ಶೀವಾದ ಪಡೆಯುತ್ತಿದ್ದೇನೆ ಎಂದರು.
ಎಲ್ಲವೂ ತನಿಖೆಯಾಗಲಿ
ಬಿಜೆಪಿ ಸರ್ಕಾರದ ಶೇ. ೪೦ರಷ್ಟು ಕಮಿಷನ್ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಖಂಡಿತ ತನಿಖೆ ಮಾಡಲಿ ಸತ್ಯ ಬಯಲಿಗೆಳೆಯಲಿ, ಯಾರು ಯಾರಿಗೆ ಲಂಚ ಕೊಟ್ಟಿದ್ದಾರೆ ಎಂಬುದು ಗೊತ್ತಾಗಲಿ, ಹಾಗೆಯೇ ನೈಸ್ ಅಕ್ರಮ, ರೀಡೂ ಅಕ್ರಮಗಳ ಬಗ್ಗೆಯೂ ವರದಿಗಳಿವೆ. ಸರ್ಕಾರ ಕ್ರಮ ವಹಿಸಲಿ, ಆಗ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಒಳ ಸಂಚು ಮಾಡಿರುವ ಅನುಮಾನ ಬರುತ್ತೆ ಎಂದು ಸಿ.ಟಿ ರವಿ ಹೇಳಿದರು.