
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.18: ನಾನು ಕ್ಷೇತ್ರದ ಜನರ ನಿಷ್ಠಾವಂತ ಸೇವಕ. ನಿಮ್ಮೆಲ್ಲರ ಆರ್ಶೀವಾದದಿಂದ ಶಾಸಕನಾಗಿದ್ದರೂ ನನಗೆ ಶಾಸಕನೆಂಬ ಅಹಂ ಇಲ್ಲ. ಶಾಸಕತ್ವ ಜನ ನೀಡಿದ ಭಿಕ್ಷೆ. ನನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ಸರ್ವ ಗ್ರಾಮಗಳ ಜನರ ಮನೆ ಮಗನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮ ವಹಿಸುತ್ತೇನೆ ಎಂದು ಶಾಸಕ ಹೆಚ್.ಟಿ. ಮಂಜು ಹೇಳಿದರು.
ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಸುಮಾರು 30 ಹಳ್ಳಿಗಳಲ್ಲಿ ಜನಸಂಪರ್ಕ ಯಾತ್ರೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಜೊತೆಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ತಾಲೂಕಿನ ಜನತೆ ಒಬ್ಬ ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ನನ್ನನು ಆಯ್ಕೆ ಮಾಡಿ ಶಾಸನ ಸಭೆಗೆ ಕಳುಹಿಸಿದ್ದಾರೆ. ಜನರ ನಂಬಿಕೆಗೆ ಚ್ಯುತಿಬಾರದಂತೆ ಜನಸೇವೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಚುನಾವಣೆಯ ಸಮಯದಲ್ಲಿ ಹಲವಾರು ಆಮಿಷಗಳು ಬಂದರು ಆಮಿಷಕ್ಕೆ ಒಳಗಾಗದೆ ಪಕ್ಷ ನಿಷ್ಠೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ನಾನು ವಿರೋಧ ಪಕ್ಷದ ಶಾಸಕನಾಗಿದ್ದರೂ ದುರ್ಭಲನಲ್ಲ. ಕ್ಷೇತ್ರದ ಅಭಿವೃದ್ದಿಗೆ ನನ್ನದೆ ಆದ ಆಲೋಚನೆಗಳಿವೆ. ಸರ್ಕಾರದ ಎಲ್ಲಾ ಸಚಿವರುಗಳೊಂದಿಗೆ ವಿಶ್ವಾಸ ಗಳಿಸಿ ಕ್ಷೇತ್ರದ ಅಭಿವೃದ್ದಿಗೆ ಅಗತ್ಯ ಅನುದಾನ ತರುತ್ತೇನೆಂಬ ನಂಬಿಕೆ ನನಗಿದೆ. ಚುನಾವಣೆಯವರೆಗೆ ಮಾತ್ರ ಪಕ್ಷ ರಾಜಕಾರಣ. ಚುನಾವಣೆಯ ಅನಂತರ ಎಲ್ಲರೂ ನಮ್ಮವರೇ. ಸಂಘರ್ಷದ ರಾಜಕಾರಣಕ್ಕಿಂತ ವಿಶ್ವಾಸದ ರಾಜಕಾರಣದ ಮೇಲೆ ನನಗೆ ಹೆಚ್ಚು ನಂಬಿಕೆ. ಸರ್ವ ಪಕ್ಷದ ಎಲ್ಲಾ ಮುಖಂಡರ ವಿಶ್ವಾಸಗಳಿಸಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ನನ್ನ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯು ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಪಕ್ಷ ಬೇಧ ಮರೆತು ತಾಲೂಕಿನ ಹಿರಿಯರ ಮಾರ್ಗದರ್ಶನ ಪಡೆದು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೆಚ್.ಟಿ ಮಂಜು ಭರವಸೆ ನೀಡಿದರು.
ಬಳಿಕ ಮಾತನಾಡಿದ ಮನ್ ಮುಲ್ ನಿರ್ದೇಶಕ ಡಾಲು ರವಿ ನಮ್ಮ ಪಕ್ಷದ ನೂತನ ಶಾಸಕರು ಸಾಮಾನ್ಯ ಬಡ ಕುಟುಂಬದ ಜನಿಸಿ ಬಂದಿರುವುದರಿಂದ ಬಡವರ ರೈತರ ಕಷ್ಟ ಅರಿವಿದ್ದು ಹಿಂದೆ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಮನ್ಮುಲ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಸಹಕಾರಿಯಾಗಲಿದೆ ಅಭಿವೃದ್ಧಿಯಾಗುವ ಯೋಜನೆ ಅನುದಾನಗಳನ್ನು ತಂದು ತಾಲೂಕಿನ ಮಾದರಿ ತಾಲೂಕನ್ನಾಗಿ ಮಾಡಲು ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ದುಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎ.ಎನ್.ಜಾನಕಿರಾಮ್. ತಾ.ಪಂ. ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.