ನಾನು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ: ಪುರುಷೋತ್ತಮ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 18- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಈ ಮೀಸಲು ಕ್ಷೇತ್ರದಿಂದ ನಾನು ಕೂಡ ಕಾಂಗ್ರೆಸ್ ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ವಕೀಲ ಪಿ.ಪುರುμÉೂೀತ್ತಮ್ ಹೇಳಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ಸಭೆ ನಡೆಸಿ, ನಾನು ಚಾಮರಾಜನಗರ ಟೌನ್ ಪಕ್ಷದ ರಾಮ ಸಮುದ್ರ ಬಡಾವಣೆಯ ನಿವಾಸಿಯಾಗಿದ್ದು, ಕಳೆದ 30 ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ಮೂಲ ಕಾಂಗ್ರೆಸ್ಸಿಗನಾಗಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದೇನೆ. ಎಲ್ಲ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಾ ಬಂದಿದ್ದೇನೆ ಎಂದರು.
ನಮ್ಮ ಕುಟುಂಬವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿದ್ದು, ನಮ್ಮ ತಂದೆ ವಕೀಲರಾಗಿದ್ದ ಎಚ್.ಎಂ.ಪುಟ್ಟಮಾದಯ್ಯ, ತಾತ ಪಿ.ಬಸವಣ್ಣ ಅವರು ಕೂಡ ಮೂಲ ಕಾಂಗ್ರೆಸ್ಸಿಗರಾಗಿದ್ದು, ಪಕ್ಷಕ್ಕಾಗಿ ದುಡಿದಿದ್ದರು. ನಮ್ಮ ತಂದೆ ಮಾಜಿ ಶಾಸಕರುಗಳಾದ ಎಂ.ಸಿ.ಬಸಪ್ಪ, ಎಸ್. ಪುಟ್ಟಸ್ವಾಮಿರವರ ಒಡನಾಡಿಯಾಗಿ ಅವರ ಜೊತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿರುತ್ತಾರೆ. ಅಲ್ಲದೆ ದಿವಂಗತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಕೂಡ ನಮ್ಮ ಕುಟುಂಬದ ಸದಸ್ಯರಾಗಿದ್ದು, ನಮ್ಮ ದೊಡ್ಡಪ್ಪನ ಮಗನಾದ ಅವರು ನನಗೆ ಸಹೋದರರಾಗಿರುತ್ತಾರೆ.
ಅವರ ಕಾಲವಾದ ನಂತರ ಅವರ ಸ್ಥಾನವನ್ನು ತುಂಬುವ ಸಲುವಾಗಿ ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಾನು ಸ್ಥಳಿಕನಾಗಿರುವುದರಿಂದ ಕ್ಷೇತ್ರದ ಜನರಿಗೆ ಚಿರಪರಿಚಿತನಾಗಿದ್ದು, ಎಲ್ಲಾ ಜನಾಂಗದ ಒಡನಾಟವನ್ನು ಹೊಂದಿರುತ್ತೇನೆ. ಆದುದರಿಂದ ಪಕ್ಷದ ವರಿಷ್ಠರು ಈಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನಗೊಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ವಕೀಲರಾದ ಬೆಳ್ತೂರು ಕೃಷ್ಣಮೂರ್ತಿ, ಎಲ್. ಪ್ರದೀಪ್, ಬಿಸಲವಾಡಿರಾಜೇಶ್, ಹೆಚ್.ಎನ್. ಮಹೇಶ್‍ಯಾ ಕನೂರು, ಮಹದೇವಸ್ವಾಮಿ, ಯುವ ಮುಖಂಡ ಹರ್ಷಕುಮಾರ್, ತೇಜಸ್ವಿ ಭಾಗವಹಿಸಿದ್ದರು.