ನಾನು ಕುರುಬರ ಎಸ್ಟಿ ಹೋರಾಟಕ್ಕೆ ವಿರೋಧಿಸಿಲ್ಲ


ಕೇಂದ್ರ, ರಾಜ್ಯದಲ್ಲಿ ಬಿಜೆಪಿ – ಎಸ್ಟಿ ಸವಲತ್ತು ನೀಡಲಿ
ರಾಯಚೂರು.ಜ.೧೨- ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ನಾನು ವಿರೋಧವಿಲ್ಲ. ಆದರೆ, ಕುರುಬರ ಒಗ್ಗಟ್ಟನ್ನು ಹೊಡೆಯುವ ಆರ್‌ಎಸ್‌ಎಸ್ ತಂತ್ರ ಈ ಹೋರಾಟದ ಹಿಂದಿನ ರಾಜಕೀಯಲಾಗಿದೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರಿಂದು ತಿಂಥಿಣಿಯ ಕನಕಗುರು ಪೀಠದ ಸಂಸ್ಥಾನದಲ್ಲಿ ಆಯೋಜಿಸಲಾದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹೈದ್ರಾಬಾದ್ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಕುರುಬರನ್ನು ಎಸ್ಟಿ ಪಂಗಡಕ್ಕೆ ಸೇರಿಸಲು ನಾನು ಶಿಫಾರಸ್ಸು ಮಾಡಿದ್ದೇನೆ.ಆ ಸಂದರ್ಭದಲ್ಲಿ ಯಾವುದೇ ಹೋರಾಟಕ್ಕಾಗಿ ನಾನು ಜನರನ್ನು ಕರೆದಿರಲಿಲ್ಲ. ಈಶ್ವರಪ್ಪ ಅವರು ರಾಜ್ಯ ಸರ್ಕಾರದ ಸಚಿವರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸ್ಸು ಮಾಡಲಿ ಎಂದು ಸವಾಲ್ ಎಸೆದರು.
ಕುರುಬರ ಎಸ್ಟಿ ಹೋರಾಟದ ಹೆಸರಲ್ಲಿ ಸಚಿವ ಈಶ್ವರಪ್ಪ ಅವರು ಯಾರ ವಿರುದ್ಧ ಹೋರಾಟ ನಡೆಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೋ ಅಥವಾ ಕೇಂದ್ರ ನರೇಂದ್ರ ಮೋದಿ ಅವರ ವಿರುದ್ಧವೋ ಎಂದು ಪ್ರಶ್ನಿಸಿದ ಅವರು, ಆರ್‌ಎಸ್‌ಎಸ್ ಈ ಹೋರಾಟದ ಹಿಂದೆ ರಾಜಕೀಯ ನಡೆಸಿದೆ. ರಾಜ್ಯದಲ್ಲಿ ಕುರುಬರನ್ನು ಹೊಡೆಯುವ ಮತ್ತು ನನ್ನ ವಿರುದ್ಧ ಷಡ್ಯಂತ್ರದ ತಂತ್ರ ಹೂಡಲಾಗಿದೆ. ಆದರೆ, ಇದ್ಯಾವುದು ಬಿಜೆಪಿಗೆ ಅನುಕೂಲವಾಗುವುದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಇತರ ಜಿಲ್ಲೆಗಳ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರ ಅಧ್ಯಯನಕ್ಕಾಗಿ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ. ಕುಲಶಾಸ್ತ್ರ ಅಧ್ಯಯನ ಇನ್ನೂ ಬಂದಿಲ್ಲ. ಈಶ್ವರಪ್ಪ ಅವರು ಈಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಸಂಬಂಧಪಟ್ಟ ನಿರ್ದೇಶಕರನ್ನು ಕರೆದು ಕುಲಶಾಸ್ತ್ರ ಅಧ್ಯಾಯ ವರದಿ ತರಸಿಕೊಳ್ಳಲಿ. ನಾನು ಯಾವುದೇ ಸಂದರ್ಭದಲ್ಲೂ ಕುರುಬರು ಎಸ್ಟಿ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಇದನ್ನು ಬಳಸಿಕೊಂಡು ಕುರುಬರನ್ನು ಒಗ್ಗಟ್ಟನ್ನು ಹೊಡೆಯುವ ಆರ್‌ಎಸ್‌ಎಸ್ ಕುತಂತ್ರದ ಬಗ್ಗೆ ಎಚ್ಚರಿಸುತ್ತಿದ್ದೇನೆ. ಈ ಹೋರಾಟ ಈಶ್ವರಪ್ಪ ವರ್ಸಸ್ ಈಶ್ವರಪ್ಪ ವಿರುದ್ಧವೇ ನಡೆದಿದೆಯೇ ಎಂದು ಅವರು ಟಾಂಗ್ ನೀಡಿದರು.