ನಾನು ಏಳು ಸಮುದ್ರದ ನೀರು ಕುಡಿದು ಬಂದಿರುವವನು: ಕೆ.ಸಿ.ಎನ್

ಕೆ.ಆರ್.ಪೇಟೆ: ಜು.16:- ನಾನು ಏಳು ಸಮುದ್ರದ ನೀರು ಕುಡಿದು ಬಂದಿರುವವನು. ಕೆಲವೊಮ್ಮೆ ಕೊಚ್ಚೆ ನೀರನ್ನೂ ಕುಡಿದಿರಬಹುದು. ನಾನು ತಲೆ ಬಾಗುವುದು ಸಾಧು-ಸಂತರು, ಗುರು ಹಿರಿಯರಿಗೆ ಮಾತ್ರ ಎಂದು ರಾಜ್ಯ ರೇಷ್ಮೆ, ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಅವರು ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿ ಶೀಳನೆರೆ ಹೋಬಳಿ ನಯನಜ ಕ್ಷತ್ರೀಯ ಸಮಾಜದ ನೂತನ ಘಟಕ ಮತ್ತು ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ದಿಗಾಗಿ ಜೆಡಿಎಸ್ ತ್ಯಜಿಸಿ ಬಿಜೆಪಿಗೆ ಬರಬೇಕಾಯಿತು. ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆಯುವ ಸ್ವಭಾವದವರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ನಾವು 17 ಜನ ಶಾಸಕರು ತ್ಯಾಗಮಾಡಿದೆವು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಅನಂತರ ಕ್ಷೇತ್ರದ ಅಭಿವೃದ್ದಿಗೆ 1700 ಕೋಟಿ ಅನುದಾನ ನೀಡಿದ್ದಾರೆ. ಯಡಿಯೂರಪ್ಪ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ತಾಲೂಕಿನ ನಾಲೆಗಳಿ ಅಭಿವೃದ್ದಿಗೆ ನೂರಾರು ಕೋಟಿ ಅನುದಾನ ನೀಡಿದ್ದರು.
ಯಡಿಯೂರಪ್ಪ ಹೊರತು ಪಡಿಸಿ ಯಾರೊಬ್ಬರೂ ಕ್ಷೇತ್ರದ ಅಭಿವೃದ್ದಿಗೆ ನೂರಾರು ಕೋಟಿ ನೀಡಲಿಲ್ಲ ಮುಂದಿನ ಮೂರು ತಿಂಗಳ ಒಳಗೆ ಕ್ಷೇತ್ರದ ರಸ್ತೆಗಳ ಅಭಿವೃದ್ದಿಗೆ ಇನ್ನೂ 300 ಕೋಟಿ ಹಣ ತರುತ್ತೇನೆ. ಗ್ರಾಮೀಣ ಭಾಗದ ಯಾವುದೇ ರಸ್ತೆಯನ್ನೂ ಬಿಡದೆ ಮುಂದಿನ ಆರು ತಿಂಗಳುಗಳ ಒಳಗೆ ತಾಲೂಕಿನ ಸಮಗ್ರ ರಸ್ತೆಗಳ ಅಭಿವೃದ್ದಿ ಮಾಡಿ ತೋರಿಸುತ್ತೇನೆಂದರು.
ಮಾಜಿ ಶಾಸಕ ಬಿ.ಪ್ರಕಾಶ್ ಮಾತನಾಡಿ ಪ್ರತಿಯೊಂದು ತಳ ಸಮುದಾಯಗಳೂ ಸಂಘಟನೆಯ ಮೂಲಕ ತಮ್ಮ ಸಂವಿಧಾನ ಬದ್ದ ಹಕ್ಕುಗಳಿಗೆ ಹೋರಾಟ ನಡೆಸಬೇಕೆಂದರು. ನಯನಜ ಕ್ಷತ್ರೀಯ ಅಭಿವೃದ್ದಿ ನಿಗಮ ರಚನೆ, ಮೀಸಲಾತಿ ಮತತಿತರ ವಿಚಾರಗಳ ಬಗ್ಗೆ ನಯನಜ ಕ್ಷತ್ರೀಯ ಸಮಾಜ ಮಂಡಿಸುತ್ತಿರುವ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಆದರೆ ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿ ಹೋರಾಟವಿಲ್ಲದೆ ನಮ್ಮ ಬೆಡಿಕೆಗಳ ಈಡೇರಿಕೆ ಅಸಾಧ್ಯ. ಜನಸಂಖ್ಯೆ ಹೆಚ್ಚಾದಂತೆ ಮೀಸಲಾತಿ ಪ್ರಮಣವನ್ನು ಹೆಚ್ಚಿಸಬೇಕಾಗಿದೆ ಎಂದರು.
ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಮಾತನಾಡಿ ಹಡಪದ, ನಯನಜ, ಬಂಡಾರಿ, ನಾಪಿತ, ಸವಿತಾ ಸಮಾಜ ಮುಂತಾದ ಹೆಸರಿನಲ್ಲಿ ಹಂಚಿಹೋಗಿರುವ ಕ್ಷೌರಿಕ ಸಮಾಜ ಒಗ್ಗೂಡಬೇಕೆಂದರು. ಕ್ಷೌರಿಕ ವೃತ್ತಿ ಒಂದು ಪವಿತ್ರವಾದ ವೃತ್ತಿ. ವ್ಯಕ್ತಿಯ ಕೇಶಸೌಂದರ್ಯವನ್ನು ಹೆಚ್ಚಿಸುವ ಕ್ಷೌರಿಕ ಸಮುದಾಯವೂ ಉತ್ತಮ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ನಿಮಾಣವಾಗಬೇಕು. ಕ್ಷೌರಿಕ ವೃತ್ತಿಯ ಜೊತೆಗೆ ಎಲ್ಲಾ ಶುಭ ಕಾರ್ಯಗಳಿಗೂ ಅಗತ್ಯವಾದ ಮಂಗಳವಾದ್ಯ ನುಡಿಸುವ ನಯನಜ ಕ್ಷತ್ರೀಯ ಸಮಾಜದ ಅಭಿವೃದ್ದಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂದರು.
ತೆಂಡೇಕೆರೆಯ ಬಾಳೆ ಹೊನ್ನೂರು ಶಾಖಾ ಮಠದ ಶ್ರೀಗಳಾದ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಆರ್ಶೀವಚನ ನೀಡಿ ಬಸವಣ್ಣನವರ ಸಮಾಜ ನಿಮಾಣ ಕಾರ್ಯದಲ್ಲಿ ಹಡಪದ ಅಪ್ಪಣ್ಣನವರ ಕೊಡುಗೆಯನ್ನು ಬಣ್ಣಿಸಿದರು.