
ಬೀದರ್: ಜು.4:ಇಲ್ಲಿಯ ಸಿದ್ಧಾರೂಢ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಸಿದ್ಧಾರೂಢರ ಮಹಾ ರುದ್ರಾಭಿಷೇಕ, ಗುರು ಸ್ತೋತ್ರ, ಸಾಧಕಿಯರಿಂದ ಷೋಡಶೋಪಚಾರ ಮೂಲಕ ಶ್ರೀಗಳ ಪಾದಪೂಜೆ, ಪ್ರವಚನ ಕಾರ್ಯಕ್ರಮಗಳು ಜರುಗಿದವು.
ಜಿಲ್ಲೆ, ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಬಂದಿದ್ದ ಭಕ್ತರು ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಸುವರ್ಣ ಕಿರೀಟ ತೊಡಿಸಿ, ಕನಕ ಪುಷ್ಪವೃಷ್ಟಿಗೈದರು. ನಾಣ್ಯಗಳಿಂದ ತುಲಾಭಾರವನ್ನೂ ಮಾಡಿ ಭಕ್ತಿ ಸಮರ್ಪಿಸಿದರು.
ಬಳಿಕ ಭಕ್ತರಿಗೆ ಆಶೀರ್ವಚನ ನೀಡಿದ ಡಾ. ಶಿವಕುಮಾರ ಸ್ವಾಮೀಜಿ ಅವರು, ಪರಮಾತ್ಮನನ್ನು ಕಾಣ ಬಯಸುವವರಿಗೆ ಗುರು ಪೂರ್ಣಿಮೆ ಅತ್ಯಂತ ಮಹತ್ವದ ದಿನ. ಗುರುವಿನ ಉಪಕಾರ ತೀರಿಸುವ ದಿನವೂ ಹೌದು ಎಂದು ಹೇಳಿದರು.
ಪರಮಾತ್ಮ ಏಕೆ ಈ ದೇಹ ಕೊಟ್ಟಿದ್ದಾನೆ ಎನ್ನುವುದನ್ನು ಗುರು ತಿಳಿಸುತ್ತಾನೆ. ಕಾರಣ, ಎಲ್ಲರೂ ಗುರುವಿನ ಸನ್ನಿಧಿಗೆ ಹೋಗಬೇಕು. ಗುರುವನ್ನು ನಂಬಬೇಕು ಎಂದು ಸಲಹೆ ಮಾಡಿದರು.
ಕಲಬುರಗಿಯ ಮಾತೆ ಲಕ್ಷ್ಮಿದೇವಿ ಮಾತನಾಡಿ, ಸದ್ಗುರುವಿನ ಕೃಪೆಯಾದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಹೀಗಾಗಿ ಗುರು ಭಕ್ತ ಅವಶ್ಯಕವಾಗಿದೆ ಎಂದು ತಿಳಿಸಿದರು.
ಯಳವಂತಗಿಯ ದಯಾನಂದ ಸ್ವಾಮೀಜಿ ಮಾತನಾಡಿ, ಹರ ಮುನಿದರೂ ಗುರು ಕಾಯುತ್ತಾನೆ. ಆದ್ದರಿಂದ ಗುರುವಿನ ಸೇವೆ ಮಾಡಬೇಕು. ಅವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ನಾಸಿಕದ ಮಾತೆ ಮನಿಶಾ, ನಾಗಪುರದ ಮಾತೆ ಶೋಭನಾ, ಇಂಡಿಯ ಸ್ವರೂಪಾನಂದ ಸ್ವಾಮೀಜಿ, ಯರಗಲ್‍ನ ಅದ್ವೈತಾನಂದ ಸ್ವಾಮೀಜಿ, ಬೀದರ್‍ನ ಗುರುದೇವಾಶ್ರಮದ ಗಣೇಶಾನಂದ ಮಹಾರಾಜ, ಮಾತೆ ಸಿದ್ಧೇಶ್ವರಿ, ಬೆಳ್ಳೂರಿನ ಮಾತೆ ಅಮೃತಾನಂದಮಯಿ, ಚಳಕಾಪುರದ ಶಂಕರಾನಂದ ಸ್ವಾಮೀಜಿ, ಮಾತೆ ಸಂಗೀತಾ ಸಮ್ಮುಖ ವಹಿಸಿದ್ದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಜಾಬಶೆಟ್ಟಿ, ಡಾ. ಚನ್ನಬಸಪ್ಪ ಹಾಲಹಳ್ಳಿ, ಬಿ.ಜಿ. ಶೆಟಕಾರ್, ಪ್ರಭುಶೆಟ್ಟಿ ಮುದ್ದಾ, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪುರೆ, ಕರಬಸಪ್ಪ ಮುಸ್ತಾಪುರೆ, ಸುಭಾಷ್ ಉಪ್ಪೆ, ಈಶ್ವರಗೌಡ ಕಮಹಳ್ಳಿ, ಮಡಿವಾಳಪ್ಪ ಗಂಗಶೆಟ್ಟಿ, ಭಾರತಿಬಾಯಿ ಕಣಜಿ, ಆಡಳಿತ ಅಧಿಕಾರಿ ಡಾ. ಹಾವಗಿರಾವ್ ಮೈಲಾರೆ, ನಿರಜಾನಂದ ಕಂದಗೂಳ, ಪ್ರಭು ಬೆಣ್ಣೆ, ಶ್ರೀದೇವಿ ತಾಯಿ ಕರಡ್ಯಾಳ, ಕಲ್ಯಾಣರಾವ್ ಬುಜಕಳ ಮೊದಲಾದವರು ಇದ್ದರು.
ಸಾಧಕ ವಿನಾಯಕ ನಿರೂಪಿಸಿದರು. ಸತೀಶ ವಂದಿಸಿದರು.