ನಾಣ್ಯಗಳಿಂದ ಡಾ. ಶಿವಕುಮಾರ ಸ್ವಾಮೀಜಿ ತುಲಾಭಾರ

ಬೀದರ್: ಜು.14:ಗುರು ಪೂರ್ಣಿಮೆ ನಿಮಿತ್ತ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಸಾಧಕರು ಹಾಗೂ ಭಕ್ತರು ಗುರುವಿಗೆ ಗೌರವ ಸಮರ್ಪಿಸಿದರು.

ಮಠದ ಸಾಧಕ, ಸಾಧಕಿಯರು ಷೋಡಶೋಪಚಾರ ಮೂಲಕ ಶ್ರೀಗಳ ಪಾದಪೂಜೆ ನೆರವೇರಿಸಿದರು. ಸುವರ್ಣ ಕಿರೀಟ ತೊಡಿಸಿ ಕನಕಪುಷ್ಪ ವೃಷ್ಟಿ ಮಾಡಿದರು.

ಭಕ್ತರಾದ ಕಸ್ತೂರಬಾಯಿ ಬಸವಂತರಾಯ, ಶಿವಾನಂದ ಅಣ್ಣಾರಾಯ, ಸುರೇಖಾ ರಾಜಪ್ಪ, ವೈಜಿನಾಥ ಕಟ್ಟಿಮನಿ ಅವರು ನಾಣ್ಯಗಳಿಂದ ಶ್ರೀಗಳ ತುಲಾಭಾರ ಸೇವೆಗೈದರು.

ಜಿಟಿ ಜಿಟಿ ಮಳೆಯ ಮಧ್ಯೆಯೂ ರಾಜ್ಯ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರದ ಪುಣೆ, ನಾಗಪುರ, ಮುಂಬೈ, ಗೋವಾ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿ, ಶ್ರೀಗಳ ದರ್ಶನ ಪಡೆದರು.

ಭವ ಸಾಗರ ದಾಟಿಸುವ ಗುರು: ಜನನ-ಮರಣ ರೂಪಿ ಭವಸಾಗರವನ್ನು ದಾಟಿಸುವವನೇ ಗುರು. ಮಾನವನಿಗೆ ಮಹಾದೇವನನ್ನಾಗಿಸುವ ಸಾಮಥ್ರ್ಯ ಗುರುವಿಗೆ ಮಾತ್ರ ಇದೆ ಎಂದು ಗುರು ಪೂರ್ಣಿಮೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.

ಜಗತ್ತಿನಲ್ಲಿ ಸಮಾಧಾನವೇ ಎಲ್ಲಕ್ಕಿಂತ ದೊಡ್ಡದು. ಅದು ಸಿಗುವುದು ಗುರುವಿನ ಸನ್ನಿಧಿಯಲ್ಲಿ. ಗುರು ಚರಣ ನಂಬಿ ಕೆಟ್ಟವರಿಲ್ಲ. ಜೀವ ಇರುವ ತನಕ ಗುರುವಿನ ಸೇವೆ ಮಾಡಿ ಧನ್ಯರಾಗಿ ಎಂದು ಸಲಹೆ ಮಾಡಿದರು.

ಕಲಬುರಗಿಯ ಮಾತೆ ಲಕ್ಷ್ಮಿದೇವಿ ಮಾತನಾಡಿ, ಮನುಷ್ಯ ಜನ್ಮಕ್ಕೆ ಬರಬೇಕಾದರೆ ಗುರು ಕೃಪೆ ಬೇಕೇ ಬೇಕು. ನಂಬಿಕೆ ಇಟ್ಟು ಗುರುವಿಗೆ ಶರಣಾಗಬೇಕು ಎಂದು ಹೇಳಿದರು.

ಜಡಿಸಿದ್ದ ಸ್ವಾಮೀಜಿ ಮಾತನಾಡಿ, ಗುರು ಪೂರ್ಣಿಮೆಯು ಗುರು ಮತ್ತು ಶಿಷ್ಯನ ನಡುವೆ ಸಂಬಂಧ ಬೆಸೆಯುವ ಹಬ್ಬವಾಗಿದೆ ಎಂದು ನುಡಿದರು.

ಗಣೇಶಾನಂದ ಮಹಾರಾಜ ಮಾತನಾಡಿ, ಗುರು ಪೂರ್ಣಿಮೆ ಶಿಷ್ಯನ ಆತ್ಮಕಲ್ಯಾಣ ದಿನ. ಸದ್ಗುರು ಚರಣ ಭಕ್ತಿ ಮಾಡುತ್ತ ಆತ್ಮಜ್ಞಾನ ಮಾಡಿಕೊಳ್ಳಲು ಇರುವ ದಾರಿ ಎಂದರು.

ನಾಗಪುರದ ಮಾತೆ ಮನಿಷಾ, ಮಾತೆ ಶೋಭನಾ, ಶಂಕರಾನಂದಜಿ, ಗುರುನಾಥ ಸ್ವಾಮೀಜಿ, ಲಕ್ಷ್ಮಣಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಸಂಗೀತಾ ದೇವಿ, ಸತೀಶ್ ದೇವರು ಉಪಸ್ಥಿತರಿದ್ದರು.

ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಸಂಚಾಲಿತ ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.