
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.31: ಪಟ್ಟಣದ ಆರಾಧ್ಯದೈವಗಳಾದ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಐತಿಹಾಸಿಕ ಜೋಡಿ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನೆರವೇರಿತು.
ಐತಿಹಾಸಿಕ ಹಿನ್ನಲೆಯುಳ್ಳ ಜೋಡಿ ರಥೋತ್ಸವಕ್ಕೆ ಮರಿಯಮ್ಮನಹಳ್ಳಿ ಸೇರಿದಂತೆ ಹೋಬಳಿಯ ಸುತ್ತಮುತ್ತಲಿನ 33 ಹಳ್ಳಿಯ ಭಕ್ತಾದಿಗಳು ಆಗಮಿಸಿ, ಜೋಡಿ ರಥಗಳಿಗೆ ಹೂವು ಹಣ್ಣು ಎಸೆದು ಭಕ್ತಿ ಮೆರೆದರು.
ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಉಭಯ ದೇವರುಗಳಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಪುನಸ್ಕಾರಗಳು ಜರುಗಿದವು.
ರಥೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉಭಯ ದೇವರುಗಳ ಪಟ ಹರಾಜು ನಡೆಯಿತು. ಈ ಬಾರಿಯ ಪಟ ಹರಾಜಿನಲ್ಲಿ ಮರಿಯಮ್ಮನಹಳ್ಳಿ ತಾಂಡದ ಕೆ.ಎ.ಎಸ್ ಅಧಿಕಾರಿ ಎಲ್ ಭೀಮನಾಯ್ಕ್ ಶ್ರೀ ಆಂಜನೇಯ ಸ್ವಾಮಿಯ ಪಟವನ್ನು 16 ಲಕ್ಷದ 11 ಸಾವಿರ ರೂ. ಗಳಿಗೆ ಹಾಗೂ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಪಟವನ್ನು 6 ಲಕ್ಷದ 15 ಸಾವಿರ ರೂ ಗಳಿಗೆ ಹರಾಜಿನಲ್ಲಿ ಪಡೆದರು.
ಸೂಕ್ತ ಬಂದೋಬಸ್ತ್: ಪಟ್ಟಣದ ಪೊಲೀಸರು ರಥೋತ್ಸವದಂದು ಆಗಮಿಸಿದ ಭಕ್ತರ ಸಮೂಹವನ್ನು ನಿಯಂತ್ರಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಪಟ್ಟಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು, ವಾಹನಗಳನ್ನು ಪಟ್ಟಣದ ಒಳಗೆ ಪ್ರವೇಶಿಸದಂತೆ ನಿರ್ಬಂಧಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿದರು.
ನೀರಿನ ಅರವಟಿಕೆಗಳು: ಬಿಸಿಲಿನ ತಾಪದಿಂದ ಸುಸ್ತಾದ ಭಕ್ತರಿಗೆ ಅಲ್ಲಲ್ಲಿ ಪಟ್ಟಣದ ದಾನಿಗಳು ಕುಡಿಯುವ ನೀರು, ಮಜ್ಜಿಗೆ ಹಾಗೂ ಪಾನಕದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದದ್ದು ವಿಶೇಷವಾಗಿತ್ತು.