ನಾಡ ದೇವತೆಯ ವರ್ಧಂತಿ ಮಹೋತ್ಸವ

ಮೈಸೂರು,ಜು.20:- ಮೈಸೂರು ಚಾಮುಂಡಿ ಬೆಟ್ಟದಲ್ಲಿ ನೆಲೆ ನಿಂತಿರುವ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಇಂದು ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನಡೆಯುತ್ತಿವೆ.
ದೇವಿಗೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮಾಚರಣೆ ಮತ್ತು ಇತರ ಪೂಜಾ ಕೈಂಕರ್ಯಗಳು ನಡೆದಿವೆ. ಆಷಾಢ ಮಾಸದ ಕೃಷ್ಣಪಕ್ಷದ ಸಪ್ತಮಿ ರೇವತಿ ನಕ್ಷತ್ರದಂದು ವರ್ಧಂತಿ ಇರುವುದರಿಂದ ಇಂದು ಬಹಳ ವಿಶೇಷವಾಗಿತ್ತು. ಸಂಪ್ರದಾಯದಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗಿದೆ.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಯುವರಾಣಿ ತ್ರಿಶಿಕಾ ಕುಮಾರಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಪೂಜೆಯಲ್ಲಿ ಭಾಗಿಯಾಗಿದ್ದರು.
ಚಿನ್ನದ ಪಲ್ಲಕ್ಕಿಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ಈ ವೇಳೆ 21 ಕುಶಾಲತೋಪು ಸಿಡಿಸುವ ಮೂಲಕ ತಾಯಿಗೆ ಗೌರವ ಅರ್ಪಿಸಲಾಯಿತು.
ಮೈಸೂರು ಪ್ರವಾಸದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಇಂದು ವರ್ಧಂತಿ ಮಹೋತ್ಸವ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ದಂಪತಿ ಸಮೇತ ಭೇಟಿ ನೀಡಿ ನಾಡ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮೊದಲು ಪೂಜೆ ಸಲ್ಲಿಸಿದ ಮುಖ್ಯಮಂತ್ರಿಗಳು ನಂತರ ದೇಗುಲದೊಳಗೆ ತೆರಳಿ ತಾಯಿಯ ದರ್ಶನವನ್ನು ಪಡೆದರು.
ಬ್ಯಾಂಡ್, ಮಂಗಳವಾದ್ಯ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ಸಹಸ್ರಾರು ಭಕ್ತರು ಪಾಲ್ಗೊಂಡು ವೈಭವವನ್ನು ಕಣ್ತುಂಬಿಸಿಕೊಂಡರಲ್ಲದೇ, ಪುನೀತರಾದರು. ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಾರ್ವಜನಿಕರ ವಾಹನಗಳಿಗೆ ನಿಷೇಧಿಸಲಾಗಿದ್ದು, ಸಾರ್ವಜನಿಕರನ್ನು ಬೆಟ್ಟದ ಮೇಲೆ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೆಟ್ಟದ ಪಾದದ ಹೆಲಿಪ್ಯಾಡ್ ನಿಂದ ಸಾರಿಗೆ ಸಂಚಾರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಚಾಮುಂಡೇಶ್ವರಿ ದಾಸೋಹ ಭವನದಲ್ಲಿ ನಿರಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಖ್ಯಮಂತ್ರಿಗಳಿಗೆ ಸಚಿವರುಗಳಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ ಸಾಥ್ ನೀಡಿದರು.