ಸಂಜೆವಾಣಿ ವಾರ್ತೆ
ಸಂಡೂರು :ಜೂ:28 ಸರ್ಕಾರಿ ವಿವಿಧ ಯೋಜನೆಗಳ ಸದುಪಯೋಗಕ್ಕಾಗಿ ಹೋಬಳಿಯ ವಿವಿಧ ಗ್ರಾಮಗಳಿಂದ ನಾಡಕಾರ್ಯಾಲಯಕ್ಕೆ ಜನತೆ ಆಗಮಿಸುತ್ತಿದ್ದು, ಸಿಬ್ಬಂದಿಗಳ ಕೊರತೆ, ತಾಂತ್ರಿಕ ಸಮಸ್ಯೆಯಿಂದ ಕೆಲಸಗಳು ಸಕಾಲಕ್ಕೆ ನೆರವೇರುತ್ತಿಲ್ಲ. ಬಹುತೇಕ ಗ್ರಾಮಗಳ ವಿದ್ಯರ್ಥಿಗಳು, ಮಹಿಳೆಯರು ಹಾಗೂ ವೃದ್ದೆಯರು ದೂರದಿಂದ ಬೆಳಗಿನಂದಲೇ ಆಗಮಿಸಿ ಇಲ್ಲಿನ ಸಮಸ್ಯೆಗಳಿಂದ ಬೇಸತ್ತು ತಮ್ಮ ಗ್ರಾಮಗಳಿಗೆ ಮರಳುವುದು ಸಾಮಾನ್ಯವಾಗಿದ್ದು, ಜನರ ಅನುಕೂಲಕ್ಕಾಗಿ ಶೀಘ್ರವಾಗಿ ಉಪ ತಹಶೀಲ್ದಾರ, ದ್ವಿತೀಯ ದರ್ಜೆ ಸಹಾಯಕ ಹಾಗೂ ಜವಾನ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಕೊಡಾಲು ಗ್ರಾಮದ ಮಹಿಳೆ ರಾಜಮ್ಮ ಒತ್ತಾಯಿಸಿದರು.
ಅವರು ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದ ನಾಡಕಚೇರಿಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಜನರು ನಾಡ ಕಾರ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ನಂತರ ಮಾತನಾಡಿ, ಉಪ ತಹಶಿಲ್ದಾರ, ದ್ವಿತೀಯ ದರ್ಜೆಯ ಸಹಾಯಕ, ಖಾಯಂ ಕಂಪ್ಯೂಟರ್ ಆಪರೇಟರ್ ಜವಾನ್ ಹುದ್ದೆ ಹಲವಾರು ವರ್ಷಗಳಿಂದ ಖಾಲಿ ಇರುವ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರಲ್ಲದೇ ಜಿಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕಾರಣವೇನು ಎಂದು ಪ್ರಶ್ನಿಸಿದರು.
ತಾಳೂರು ಗ್ರಾಮದ ಅಮ್ಮ ಸಂಸ್ಥೆಯ ಕಾರ್ಯದರ್ಶಿ ತಮ್ಮ ಅಸಮಧಾನ ವ್ಯಕ್ತಪಡಿಸಿ, ಕಾರ್ಯಲಯದಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ನಿತ್ಯ ಸಿಬ್ಬಂದಿ ತ್ಯಾಜ್ಯದಲ್ಲಿ ಕೆಲಸ ನಿರ್ವಹಸುತ್ತಾರೆ. ಶೌಚಾಲಯವು ಪಾಳು ಬಿದ್ದಿರುವುದರಿಂದ ಮಹಿಳಾ ಸಿಬ್ಬಂದಿ ಸೇರಿದಂತೆ ಇತರೆ ಸಿಬ್ಬಂದಿ ಶೌಚಾಲಯಕ್ಕೆ ಬಯಲನ್ನು ಅವಲಂಬಿಸಿದ್ದಾರೆ. ಕಾರ್ಯಾಲಯವು ಪಾಳು ಬಿದ್ದ ಸಾರ್ವಜನಿಕರು ಆವರಣದಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಸಿಬ್ಬಂದಿಯವರು ನಿತ್ಯ ಹಿಂಸೆಯನ್ನ ಅನುಭಿವುಸತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇಂಥಹ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಇರುವುದು ಬೇಸರದ ಸಂಗತಿಯಾಗಿದೆ ಎಂದು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.
ಪ್ರತಿಕ್ರಿಯೆ ನಾಡ ಕಾರ್ಯಾಲಯದ ಕೇಂದ್ರದಲ್ಲಿ ಉಪತಹಶೀಲ್ದಾರ್ ಅವರಿಗೆ ಹೆಚ್ಚುವರಿಯಾಗಿ ಬೇರೆ ಹೋಬಳಿ ತಾಲ್ಲೂಕು ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಡಿ.ಎ ಸಿಬ್ಬಂದಿಯನ್ನು ಶೀಘ್ರವಾಗಿ ನೇಮಕ ಮಾಡಲಾಗುವುದು ಎಂದು ಸಂಡೂರಿನ ತಹಶೀಲ್ದಾರ್ ಶಾಂತಲಾ ಚಂದನ್ ರವರು ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ನಾಗರೀಕರಾದ ಕಟ್ಟೆಪ್ಪ ಲೋಕೇಶ ಬುಡ್ಡಿಗೆ ರುದ್ರಪ್ಪ ಪವನ, ಗಜೇಂದ್ರ, ಗಿರಿಜಮ್ಮ, ಚಂದ್ರಮ್ಮ ವಿದ್ಯರ್ಥಿಗಳುಉಪಸ್ಥಿತರಿದ್ದರು.